ಬಳ್ಳಾರಿ, ಫೆ 19 (MSP): ಹಂಪಿಯ ವಿಷ್ಣು ದೇವಾಲಯದ ಕಂಬಗಳನ್ನು ಬೀಳಿಸಿದ್ದ ಕಿಡಿಗೇಡಿಗಳಿಗೆ ಹೊಸಪೇಟೆ ನ್ಯಾಯಾಲಯ ಬಿಸಿ ಮುಟ್ಟಿಸುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ. ಸ್ಮಾರಕಗಳನ್ನು ಕೆಡವಿ ಹಾಳುಗೆಡವಿದ್ದ ಮಧ್ಯಪ್ರದೇಶದ ಆಯುಷ್, ಬಿಹಾರದ ರಾಜಾಬಾಬು ಚೌದರಿ, ರಾಜ್ ಆರ್ಯನ್ ಹಾಗೂ ರಾಜೇಶ್ ಕುಮಾರ್ ಚೌದರಿ ಅವರನ್ನು ಬಳ್ಳಾರಿ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದರು.
ಆದರೆ ಆರೋಪಿಗಳಿಗೆ ಜಾಮೀನು ಮಂಜೂರು ಸಂದರ್ಭ ಹೊಸಪೇಟೆಯ ಜೆಎಂಎಫ್ಸಿ ನ್ಯಾಯಾದೀಶೆ ಪೂಣಿರ್ಮಾ ಯಾಧವ ಅವರು ಮಹತ್ವದ ಆದೇಶ ನೀಡಿದ್ದಾರೆ. ನಾಲ್ವರಿಗೆ ತಲಾ 70 ಸಾವಿರ ರೂ ದಂಡ ವಿಧಿಸಿದ್ದ ಮಾತ್ರವಲ್ಲದೆ ದ್ವಂಸಗೊಳಿಸಿರುವ ಕಂಬಗಳನ್ನು ಹಳೆಯ ಮಾದರಿಯಲ್ಲೇ ಮರು ನಿರ್ಮಿಸಿಕೊಡಬೇಕು ಎಂದು ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ 2.8 ಲಕ್ಷವನ್ನು ದಂಡ ಪಾವತಿಸಿ ಆರೋಪಿಗಳು ಕಂಬಗಳನ್ನು ನಿಲ್ಲಿಸಿದ್ದಾರೆ. ಆರೋಪಿಗಳು ಮರಳಿ ಸ್ಮಾರಕಗಳನ್ನ ನಿಲ್ಲಿಸಿದ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಹಾಗೂ ಪೊಲೀಸರು ವರದಿ ನೀಡಿದ ನಂತರ ನ್ಯಾಯಾಲಯ , ಇನ್ಯಾವುದೇ ಪಾರಂಪರಿಕ ಕಟ್ಟಡಗಳನ್ನು ದ್ವಂಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿ ಜಾಮೀನು ಮಂಜೂರು ಮಾಡಿದೆ.
ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವನ್ನು ನಡೆಸುತ್ತಿದೆ ಆದರೆ ಯಾರೋ ಕೀಡಿಗೇಡಿಗಳು ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆಯ ಬಳಿಯ ಸಾಲು ಕಂಬಗಳನ್ನ ಕೆಡವಿ ಸ್ಮಾರಕಗಳನ್ನ ಕೆಡವಿದ ವಿಡಿಯೋ ಫೆಬ್ರವರಿ 1 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯ ನಂತರ ಎಚ್ಚೆತ್ತುಕೊಂಡಿದ್ದ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಬಳ್ಳಾರಿ ಪೊಲೀಸರು ಬಳಿಕ ಆರೋಪಿಗಳನ್ನು ಬಂಧಿಸಿದ್ದರು.