ನವದೆಹಲಿ,ಫೆ 26(MSP):ಪುಲ್ವಾಮಾ ಉಗ್ರ ದಾಳಿಯ ಪ್ರತಿಕಾರವಾಗಿ ಭಾರತವೂ ಪಾಕ್ ಉಗ್ರ ನೆಲೆಗಳ ಮೇಲೆ ನಡೆಸಿದ ಏರ್ ಸ್ಟ್ರೈಕ್ ಪ್ರತೀಕಾರದ ದಾಳಿಯಲ್ಲಿ ಉಗ್ರ ಸಂಘಟನೆಯ ಮೂರು ಕಂಟ್ರೋಲ್ ರೂಂ ಸರ್ವನಾಶವಾಗಿದೆ ಎಂದು ತಿಳಿದು ಬಂದಿದೆ. ಕೇವಲ 21 ನಿಮಿಷಗಳ ದಾಳಿಯಲ್ಲಿ ಸುಮಾರು 500 ಮೀಟರ್ ನಷ್ಟು ಸ್ಥಳ ಸಂಪೂರ್ಣವಾಗಿ ದ್ವಂಸವಾಗಿದೆ.
ಭಾರತೀಯ ವಾಯುಸೇನೆಯ ಮಿರಾಜ್ 2000 ಯುದ್ಧ ವಿಮಾನಗಳನ್ನು ದಾಳಿ ಸಂದರ್ಭ ಬಳಕೆ ಮಾಡಿದ್ದು, ಕ್ಷಿಪ್ರ ವಾಯುದಾಳಿಯಲ್ಲಿ ಆಕ್ರಮಿತ ಕಾಶ್ಮೀರ ಭಾಗದಲ್ಲಿದ್ದ ಜೈಶ್-ಎ-ಮಹಮ್ಮದ್ ಉಗ್ರಗಾಮಿ 3 ನೆಲೆಗಳನ್ನು ಸರ್ವನಾಶ ಮಾಡಿದೆ.
ಮಂಗಳವಾರ ನಸುಕಿನ ಜಾವ 3.30ರ ಸುಮಾರಿಗೆ ಗಡಿನಿಯಂತ್ರಣ ರೇಖೆಯನ್ನು ದಾಟಿದ ನಮ್ಮ ವಾಯುಸೇನೆಯ ವಿರಾಜ್ ಫೈಟರ್ ಜೆಟ್ ಗಳು ಪಾಕಿಸ್ಥಾನದ ರಾಡಾರ್ ವ್ಯವಸ್ಥೆಯನ್ನು ಜಾಮ್ ಗೊಳಿಸಿ ಜೈಶ್ ನ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಮೊದಲ ದಾಳಿಯನ್ನು ಮುಂಜಾನೆ 3.45ರ ವೇಳೆಗೆ ಬಾಲ್ಕೋಟ್ ಮೇಲೆ ಮಾಡಿದೆ. ನಂತರ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ. ಈ ವೇಳೆ 100 ಕಿಲೋ ಗ್ರಾಂನ 10 ಬಾಂಬ್ ಗಳನ್ನು ಸುರಿಸಿ ಸುರಕ್ಷಿತವಾಗಿ ತಮ್ಮ ಮೂಲ ನೆಲೆಗಳಿಗೆ ವಾಪಾಸು ಬಂದಿವೆ.