ನವದೆಹಲಿ, ಮಾ 02(SM): ಅಂತು ಪಾಕ್ ಸೇನೆಯ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೊಂಡು ತಾಯ್ನಾಡಿಗೆ ಮರಳಿದ್ದಾರೆ. ಇಡೀ ದೇಶಕ್ಕೆ ದೇಶವೇ ಅಭಿನಂದನ್ ಅವರಿಗೆ ಅಭಿವಂದನೆ ಸಲ್ಲಿಸಿದೆ. ವಿಂಗ್ ಕಮಾಂಡರ್ ಬಿಡುಗಡೆ ಮೂಲಕ ಭಾರತಕ್ಕೆ ರಾಜತಾಂತ್ರಿಕ ಗೆಲುವಾಗಿದೆ. ಅಲ್ಲದೆ, ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಲ್ಪ ಅವಧಿಯಲ್ಲಿ ಯುದ್ಧ ಖೈದಿಯೊಬ್ಬರನ್ನು ಬಿಡುಗಡೆಗೊಳಿಸಿರುವ ಮೂಲಕ ಭಾರತ ಶಕ್ತಿ ವಿಶ್ವ ಮಟ್ಟದಲ್ಲಿ ಗೋಚರಿಸಿದೆ.
ಒಂದೆಡೆ ವಿಶ್ವ ರಾಷ್ಟ್ರಗಳು ಹಾಗೂ ಭಾರತದ ಒತ್ತಡಕ್ಕೆ ಮಣಿದು ಅಭಿನಂದನ್ ಅವರನ್ನು ಎರಡೇ ದಿನದಲ್ಲಿ ಬಿಡುಗಡೆಗೊಳಿಸಲಾಗಿದೆ. ಆದರೆ, ಇದೀಗ ಆರ್ ಎಸ್ ಎಸ್ ಶ್ರಮದಿಂದ ಅಭಿನಂದನ್ ಬಿಡುಗಡೆಯಾಗಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿಕೊಂಡಿದ್ದಾರೆ.
ಪಾಕ್ ಸೇನೆಗೆ ಸೆರೆಯಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ 48 ಗಂಟೆಯೊಳಗೆ ಭಾರತಕ್ಕೆ ಮರಳಲು ಆರ್ಎಸ್ಎಸ್ ಸ್ವಯಂಸೇವಕ (ಪ್ರಧಾನಿ ಮೋದಿ)ನ ಪರಾಕ್ರಮವೇ ಕಾರಣ ಎಂದು ಹೇಳುವ ಮೂಲಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ನರೇಂದ್ರ ಮೋದಿಯೇ ಕಾರಣ ಕರ್ತರು ಎಂದು ಹೇಳಿಕೊಂಡಿದ್ದಾರೆ.
ಅಭಿನಂದನ್ ಭಾರತಕ್ಕೆ ವಾಪಸ್ಸಾಗುವ ಮುನ್ನ ಮಾತನಾಡಿದ ಅವರು, ಆರ್ಎಸ್ಎಸ್ ಸ್ವಯಂಸೇವಕನ ಪ್ರರಾಕ್ರಮದಿಂದಲೇ ಭಾರತದ ಹೆಮ್ಮೆಯ ಪುತ್ರ 48 ಗಂಟೆಯೊಳಗೆ ಹಿಂದಿರುಗುತ್ತಿದ್ದಾರೆ. ಇದು ಆರ್ಎಸ್ಎಸ್ಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಈ ಮೂಲಕ ಆರ್ಎಸ್ಎಸ್ ಹಾಗೂ ಪ್ರಧಾನಿ ಮೋದಿಯ ಗುಣಗಾನ ಮಾಡಿದ್ದಾರೆ.
ಅಭಿನಂದನ್ ಬಿಡುಗಡೆಗೆ ಪ್ರಧಾನಿ ಮೋದಿಯವರ ಶ್ರಮ ಸಾಕಷ್ಟಿದೆ. ವಿಶ್ವ ರಾಷ್ಟ್ರಗಳೊಂದಿಗಿರುವ ಉತ್ತಮ ಸಂಪರ್ಕದಿಂದಲೇ ಇದು ಸಾಧ್ಯವಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಇದು ಬಿಜೆಪಿಗೆ ಸಿಕ್ಕಿರುವ ಗೆಲುವು ಎಂದು ಕೂಡ ಜನಸಾಮಾನ್ಯರು ನುಡಿಯುತ್ತಿದ್ದು, ಲೋಕಸಭಾ ಚುನಾವಣೆಯನ್ನು ಇದರೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ.