ನವದೆಹಲಿ,ಮಾ.04(AZM):ಪತ್ನಿಯನ್ನು ತ್ಯಜಿಸಿದ 45 ಅನಿವಾಸಿ ಭಾರತೀಯರ(ಎನ್ ಆರ್ ಐ) ಪಾಸ್ ಪೋರ್ಟನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಈ ಕುರಿತು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ಮಾಹಿತಿ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ ಅಧ್ಯಕ್ಷತೆಯ ಸಂಘಟಿತ ನೋಡಲ್ ಸಂಸ್ಥೆಯು ಮದುವೆಯಾಗಿ ಪತ್ನಿಯರನ್ನು ತ್ಯಜಿಸುವ ಅನಿವಾಸಿ ಭಾರತೀಯರ ಕುರಿತು ಗಮನ ನೀಡಲಿದೆ. ಹಾಗೂ ಪತ್ನಿಯನ್ನು ತ್ಯಜಿಸಿ ತಲೆಮರೆಸಿಕೊಂಡಿರುವ ಅನಿವಾಸಿ ಭಾರತೀಯರ ಬಗ್ಗೆ ಲುಕ್ಔಟ್ ನೋಟಿಸ್ ಜಾರಿಗೊಳಿಸಿದೆ, ಎಂದು ಮೇನಕ ಗಾಂಧಿ ಹೇಳಿದ್ದಾರೆ.
ಅನಿವಾಸಿ ಭಾರತೀಯ ಪತಿಯಿಂದ ಪರಿತ್ಯಕ್ತರಾಗಿರುವ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ರಾಜ್ಯಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿತ್ತು. ಆದರೆ ಇದಕ್ಕೆ ಅಂಗೀಕಾರ ದೊರಕದಿರುವುದರಿಂದ ನಿರಾಶೆಯಾಗಿದೆ ಎಂದರು.
ಎನ್ಆರ್ಐಗಳ ವಿವಾಹವನ್ನು ನೋಂದಾಯಿಸುವುದು, 1976ರ ಪಾಸ್ಪೋರ್ಟ್ ಕಾಯ್ದೆಗೆ ತಿದ್ದುಪಡಿ, 1973ರ ಕ್ರಿಮಿನಲ್ ಪ್ರಕ್ರಿಯೆ ಕಾಯ್ದೆಗೆ ತಿದ್ದುಪಡಿ ಬಯಸುವ ಮಸೂದೆಯನ್ನು ಸರಕಾರ ರಾಜ್ಯಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯು ವಿದೇಶ ವ್ಯವಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹ ಇಲಾಖೆ ಹಾಗೂ ಕಾನೂನು ಮತ್ತು ನ್ಯಾಯ ಇಲಾಖೆಯ ಜಂಟಿ ಉಪಕ್ರಮವಾಗಿದೆ.