ಪಂಜಾಬ್,ಮಾ.04(AZM): ಪಾಕಿಸ್ತಾನದಲ್ಲಿ ಉಗ್ರರ ನೆಲೆಯನ್ನು ಧ್ವಂಸ ಮಾಡಿ 300 ಉಗ್ರವಾದಿಗಳನ್ನು ಕೊಂದು ಹಾಕಿದ್ದಕ್ಕೆ ಸಾಕ್ಷಿ ನೀಡಿ ಎಂದು ಪಂಜಾಬ್ ನ ಮಂತ್ರಿಯಾಗಿರುವ ಸಿಧು ಟ್ವೀಟ್ ಮಾಡಿದ್ದಾರೆ.
"300 ಉಗ್ರವಾದಿಗಳು ಸತ್ತರೇ?,ಇಲ್ಲವೇ? ನೀವು ಧ್ವಂಸ ಮಾಡಿರುವುದು ಉಗ್ರಗಾಮಿಗಳನ್ನೋ ಅಥವಾ ಮರಗಳನ್ನೋ? ಇದು ಚುನಾವಣಾ ಗಿಮಿಕ್ಕಾ?" ಎಂದೂ ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಇಷ್ಟಲ್ಲದೆ, ಪಾಕಿಸ್ತಾನಿ ಮಾಧ್ಯಮಗಳಲ್ಲಿ ಬಂದಿರುವ ವೀಡಿಯೊವನ್ನು ಕೂಡ ಅವರು ತಮ್ಮದೇ ಟ್ವೀಟ್ಗೆ ಅಳವಡಿಸಿ, ಪಾಕ್ ಮಾಧ್ಯಮಗಳ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಇದಕ್ಕೆ ಮೊದಲು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಕೂಡ, ಪಾಕಿಸ್ತಾನದಲ್ಲಿ ಉಗ್ರರ ನೆಲೆ ಧ್ವಂಸವಾಗಿರುವ ಕುರಿತು ಸಾಕ್ಷ್ಯ ಕೊಡಿ ಅಂತ ಕೇಳಿದ್ದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ, ಹಿರಿಯ ಕಾಂಗ್ರೆಸಿಗ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಅವರೂ ಪ್ರಧಾನಿಯನ್ನು ಪ್ರಶ್ನಿಸಿದ್ದು, ಫೆ.26ರ ದಾಳಿಯಲ್ಲಿ 300 ಉಗ್ರರು ಸತ್ತಿದ್ದಾರೆಂಬುದನ್ನು ನಿಮ್ಮ ಸಚಿವ ಸಂಪುಟದ ಮಂತ್ರಿಯೊಬ್ಬರು ಅಲ್ಲಗಳೆಯುತ್ತಿದ್ದು, ಈ ಕುರಿತು ಸ್ಪಷ್ಟನೆ ನೀಡಿ ಎಂದು ಕೇಳಿದ್ದಾರೆ.