ವಿಜಯಪುರ,ಮಾ 05(MSP): ಶಿವರಾತ್ರಿ ಪ್ರಯುಕ್ತ ಸೋಮವಾರ ನೂರಾರು ಭಕ್ತರು ಸರತಿಯಲ್ಲಿ ನಿಂತಿದ್ದ ವೇಳೆ ಗೃಹ ಸಚಿವ ಎಂ.ಬಿ ಪಾಟೀಲ್ ನೇರವಾಗಿ ಆಗಮಿಸಿ ಈಶ್ವರನ ದರ್ಶನ ಪಡೆಯಲು ಮುಂದಾದಾಗ ವಿದ್ಯಾರ್ಥಿನಿಯೊಬ್ಬಳು ಗೃಹ ಸಚಿವರನ್ನೇ ಪ್ರಶ್ನಿಸಿ ಅಚ್ಚರಿ ಮೂಡಿಸಿದ್ದಾಳೆ.
ಬಿಎಲ್ ಡಿ ಇ ಸಂಸ್ಥೆಯ ಆವರಣದಲ್ಲಿರುವ ಪುರಾಣ ಪ್ರಸಿದ್ಧ 770 ಲಿಂಗಗಳ ಶಿವ ದೇವಾಲಯಕ್ಕೆ ಗುಡಿಯೊಳಗೆ ಸಚಿವರು ನೇರವಾಗಿ ತೆರಳಿ ಲಿಂಗಗಳ ದರ್ಶನ ಪಡೆಯುತ್ತಿದ್ದಾಗ ಭಕ್ತರ ಸಾಲಿನಲ್ಲಿದ್ದ ವಿದ್ಯಾರ್ಥಿನಿ ಒಂದು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೇವೆ. "ನೀವು ಮಂತ್ರಿಯಾಗಿರಬಹುದು, ಆದರೆ ದೇವರ ಮುಂದೆ ಎಲ್ಲರೂ ಸಮಾನರಲ್ಲವೇ ? ನೀವು ಈಗ ಬಂದು ನೇರವಾಗಿ ದರ್ಶನ ಪಡೆಯುತ್ತಿದ್ದೀರಾ? ನಿಮಗಾಗಿ ವಿಶೇಷ ದರ್ಶನ ಅವಕಾಶ ಕಲ್ಪಿಸಿಕೊಳ್ಳುವುದು ಸರಿಯಲ್ಲ. ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ . ಮಾತ್ರವಲ್ಲದೆ ಗೃಹಸಚಿವರು ಕೂಡಾ ಇತರ ಭಕ್ತರಂತೆ ಸರತಿಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು ಎಂದು ವಿದ್ಯಾರ್ಥಿನಿ ಒತ್ತಾಯಿಸಿದ್ದಾಳೆ.
ಆಗ ಗೃಹ ಸಚಿವ ಪಾಟೀಲ್’ರು ಆಕೆಯ ಬಳಿ ಬಂದು ’ನನಗೂ ಸಾಮಾನ್ಯನಂತೆ ಬದುಕುವ ಇಚ್ಚೆ ಇದೆ. ಇದಕ್ಕಾಗಿಯೇ ನನಗೆ ಜೀರೋ ಟ್ರಾಫಿಕ್ ಬೇಡ ಎಂದು ಸೂಚಿಸಿದ್ದೇನೆ.ಆದರೆ ನನಗೆ ಈ ದಿನ ಇನ್ನೂ ಎರಡರಿಂದ ಮೂರು ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗಿದೆ. ಇಲ್ಲಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಇತರ ಕಾರ್ಯಕ್ರಮಗಳಿಗೆ ತೆರಳಬೇಕಾಗಿದ್ದು ಈ ಕಾರಣದಿಂದ ನಾನು ತುರ್ತು ದರ್ಶನ ಪಡೆದಿದ್ದೇನೆ ’ ಎಂದು ವಿವರಣೆ ನೀಡಿದ್ದಾರೆ. ಅಲ್ಲದೆ ಆಕೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.
ಪಾಟೀಲ್ ಅವರ ವಿವರಣೆಗಳ ಕೇಳಿದ ಬಳಿಕ ಯುವತಿ ಅವರ ನಡತೆಗೆ ಮೆಚ್ಚುಗೆ ಸೂಚಿಸಿ ಸಂತಸ ವ್ಯಕ್ತಪಡಿಸಿದಳು.