ನವದೆಹಲಿ,ಮಾ.07(AZM):ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಪಾಕಿಸ್ತಾನವು ಅಪಾರ ಹಿಂಸೆ ನೀಡಿತ್ತು ಎನ್ನುವ ಸತ್ಯಾಂಶ ಇದೀಗ ಹೊರಬಿದ್ದಿದ್ದು, ಈ ಕುರಿತಿರುವ ನೈಜ ವರದಿಯೊಂದನ್ನು ಹಿಂದೂಸ್ಥಾನ್ ಟೈಮ್ಸ್ ಹೊರಬಿಟ್ಟಿದೆ.
ಅಭಿನಂದನ್ ಅವರು ಪಾಕಿಸ್ತಾನದ ವಶದಲ್ಲಿದ್ದ ಮೊದಲ 24 ಗಂಟೆಗಳ ಕಾಲ ಬಹಳಷ್ಟು ಹಿಂಸೆ ಅನುಭವಿಸಿದ್ದು, ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ದರು. ಹಾಗೂ ವಾಯುಪಡೆಯ ಅತ್ಯಮೂಲ್ಯ ಮಾಹಿತಿಯನ್ನು ಪಡೆಯುವ ವಿಫಲ ಯತ್ನ ನಡೆಸಿತ್ತು ಎಂದು ವರದಿಯಲ್ಲಿ ಹೇಳಲಾಗುತ್ತಿದೆ.
ಭಾರತೀಯ ವಾಯು ಪಡೆಯು ದಾಳಿ ವೇಳೆ ಬಳಸುತ್ತಿದ್ದ ಅತ್ಯಧಿಕ ಭದ್ರತೆಯ ರೇಡಿಯೋ ತರಂಗಾಂತರಗಳ ಮಾಹಿತಿ, ಭಾರತೀಯ ಸೇನೆಯ ನಿಯೋಜನೆ ಮತ್ತು ಅವುಗಳ ನಿಖರ ತಾಣ, ಅತಿ ಸೂಕ್ಷ್ಮ ಸೇನಾ ಸಾರಿಗೆ ಮಾಹಿತಿ, ದಾಳಿಗೆ ಭಾರತ ಸಿದ್ಧಪಡಿಸಿರುವ ಫೈಟರ್ ಜೆಟ್ಗಳ ನಿಖರ ಸಂಖ್ಯೆ ಇತ್ಯಾದಿಗಳ ರಹಸ್ಯ ಮಾಹಿತಿಯನ್ನು ಅಭಿನಂದನ್ ಅವರಿಂದ ಪಡೆಯಲು ಪಾಕ್ ಸೇನೆ ಇನ್ನಿಲ್ಲದ ರೀತಿಯ ಮಾನಸಿಕ ಹಿಂಸೆಯನ್ನು ನೀಡಿತ್ತು.
ಅಭಿನಂದನ್ ಅವರಿಂದ ಐಎಎಫ್ ರೇಡಿಯೋ ತರಂಗಾಂತರ ಮಾತ್ರವಲ್ಲದೆ ಇನ್ನಿತರ ಹಲವು ರಹಸ್ಯ ಮಾಹಿತಿಗಳನ್ನು ಪಡೆಯಲು ಪಾಕ್ ಸೇನೆ ಆತನಿಗೆ ದಿನಪೂರ್ತಿ ನಿಂತಿರುವ ಶಿಕ್ಷೆ ನೀಡಿತು. ಮಾತ್ರವಲ್ಲದೆ ಕಿವಿ ತಮಟೆ ಕಿತ್ತುಹೋಗುವಷ್ಟು ದೊಡ್ಡ ಸದ್ದಿನ ಸಂಗೀತವನ್ನು ಆತ ಬಲವಂತದಿಂದ ಕೇಳುವಂತೆ ಮಾಡಿತು. ಜತೆಗೆ ದೈಹಿಕವಾಗಿ ಆತನ ಮೇಲೆ ಹಲ್ಲೆ ನಡೆಸಲಾಯಿತು.
ವರ್ಧಮಾನ್ ಅವರು ಪಾಕ್ ನಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದ ಬಳಿಕ ಮಿಲಿಟರಿ ಆಸ್ಪತ್ರೆಯಲ್ಲಿನ "ಕೂಲಿಂಗ್ ಡೌನ್' ಪ್ರಕ್ರಿಯೆಯಲ್ಲಿ ತನ್ನ ಹಿರಿಯ ಅಧಿಕಾರಿಗಳಿಗೆ ತಾನು ಪಾಕ್ ಸೇನೆಯ ವಶದಲ್ಲಿದ್ದಾಗ ಅನುಭವಿಸಿದ್ದ ನರಕ ಯಾತನೆಯ ವಿವರಗಳನ್ನು ತಿಳಿಸಿದರು.
ನಮ್ಮ ದೇಶದ ಆ ನಾಯಕ ಪಾಕ್ ನೀಡಿದ ಎಲ್ಲಾ ಹಿಂಸೆಯನ್ನು ಸಹಿಸಿಕೊಂಡು ಶತ್ರು ಸೇನೆಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದಿರುವಲ್ಲಿ ಯಶಸ್ವಿಯಾದರು ಎಂದು ಹಿಂದುಸ್ಥಾನ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.