ಕೊಡಗು, ಮಾ 07(SM): ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕಸರತ್ತು ಜೋರಾಗತೊಡಗಿದೆ. ಈ ನಡುವೆ ಸದ್ಯ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿದೆ. ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆಂಬ ಕುತೂಹಲ ಮೂಡಿದೆ. ಅಭ್ಯರ್ಥಿಗಳ ಹುಡುಕಾಟ ಕೂಡ ಪಕ್ಷಗಳಿಗೆ ಕಗ್ಗಂಟಾಗುತ್ತಿದೆ.
ಈ ನಡುವೆ ಕಳೆದ ಬಾರಿ ಹಾಸನದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರವರು ಕ್ಷೇತ್ರವನ್ನು ಬದಲಾಯಿಸುತ್ತಾರೆ ಎನ್ನಲಾಗಿದೆ. ಹಾಸನದ ಬದಲಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್ ಡಿಡಿ ಸ್ಪರ್ಧಿಸಲಿದ್ದಾರೆ ಎನ್ನುವ ವಂದತಿ ಹಬ್ಬುತ್ತಿದೆ.
ಹಾಸನ ಲೋಕಸಭಾ ಕ್ಷೇತ್ರದಿಂದ ಒಂದು ವೇಳೆ ಪ್ರಜ್ವಲ್ ರೇವಣ್ಣ ಕಣಕ್ಕಿಳಿದಲ್ಲಿ ದೊಡ್ಡಗೌಡರು ಜೆಡಿಎಸ್-ಕಾಂಗ್ರೆಸ್ ದೋಸ್ತಿ ಅಭ್ಯರ್ಥಿಯಾಗಿ ಇಲ್ಲಿಯೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಜೆಡಿಎಸ್ ಭದ್ರ ಪಡಿಸಲು ಸೂಕ್ತ ನೇತಾರರ ಅವಶ್ಯಕತೆ ಇದೆ. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ ಸಿಂಹ 5,03,908 ಮತಗಳು ಪಡೆದು ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ನಿಂದ ಹೆಚ್. ವಿಶ್ವನಾಥ್ 4,72,300 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ನಿಂದ ಚಂದ್ರಶೇಖರಯ್ಯ 1,38,587 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದರು. ಈ ಬಾರಿಯಾದರೂ ಬಿಜೆಪಿ ಭದ್ರ ಕೋಟೆಯನ್ನು ಛಿದ್ರಗೊಳಿಸಲು ದೋಸ್ತಿ ಸರಕಾರ ಪ್ಲ್ಯಾನ್ ಮಾಡಿಕೊಂಡಿದೆ.
ಇನ್ನೊಂದೆಡೆ ದೇವೇಗೌಡರು ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದರೆ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಬಿಜೆಪಿ ಪ್ರತಿ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.