ಬೆಂಗಳೂರು,ಮಾ,08 (MSP): ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್ನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ಎದುರಿಸುತ್ತಿರುವ ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರಕಾಶ್ ರೈ ಸಲ್ಲಿಸಿದ್ದ ಮಾನನಷ್ಟ ಪ್ರಕರಣದ ಸಂಬಂಧಪಟ್ಟಂತೆ ಪ್ರತಾಪ ಸಿಂಹ ಇಂದು ನ್ಯಾಯಲಯಕ್ಕೆ ಹಾಜರಾಗಿದ್ದರು. ಈ ಹಿಂದೆ ಹಲವು ಬಾರಿ ಸಮನ್ಸ್ ನೀಡಿದರೂ, ವಿಚಾರಣೆಗೆ ಪ್ರತಾಪ ಸಿಂಹ ಹಾಗೂ ಅವರ ವಕೀಲರು ಹಾಜರಾಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ, ಸಂಸದ ಪ್ರತಾಪ್ ಸಿಂಹ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ,ಅವರನ್ನು ಹಾಜರುಪಡಿಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶಿಸಿತ್ತು.
ನ್ಯಾಯಾಧೀಶರ ಆದೇಶದ ಮೇರೆಗೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದು ನ್ಯಾಯಲಯದ ಮುಂದೆ ಹಾಜರುಪಡಿಸಿದ್ದಾರೆ.ಇನ್ನೊಂದೆಡೆ ಪ್ರತಾಪ್ ಸಿಂಹ ಅವರು ವಾರಂಟ್ ಹಿಂಪಡೆಯುವಂತೆ ನ್ಯಾಯಲಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ವಿ.ಪಾಟೀಲ ಅವರು ಪ್ರತಾಪ ಸಿಂಹ ಅವರಿಗೆ ಕೆಲ ಸಮಯದವರೆಗೆ ಪೊಲೀಸರ ವಶದಲ್ಲಿ ಇರುವಂತೆ ನಿರ್ದೇಶನ ನೀಡಿದರು.