ನವದೆಹಲಿ,ಮಾ 08 (MSP): ಯಾವುದೇ ಧರ್ಮದ ಭಾವನೆಗೂ ನೋವುಂಟಾಗದಂತೆ ಅಯೋಧ್ಯೆ ಭೂ ವಿವಾದವನ್ನು ಸೌಹರ್ಧತೆಯಿಂದ ಬಗೆಹರಿಸಿಕೊಳ್ಳುತ್ತೇವೆ ಎಂದು ಎಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಸಂಧಾನ ಸಮಿತಿ ಮುಖ್ಯಸ್ಥ ಖಲೀಫುಲ್ಲಾ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿರುವ ಹಿನ್ನಲೆಯಲ್ಲಿ ಖಲೀಫುಲ್ಲಾ ಈ ಹೇಳಿಕೆ ನೀಡಿದ್ದಾರೆ. ಸುಪ್ರೀಂ ನೀಡಿದ ತೀರ್ಪಿನ ಪ್ರಕಾರ ಇನ್ನೊಂದು ವಾರದಲ್ಲಿ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಸಂಧಾನ ಪ್ರಕ್ರಿಯೆ ಪ್ರಾರಂಭವಾಗಬೇಕು ಮತ್ತು 2 ತಿಂಗಳ ಒಳಗೆ ಸಂಧಾನ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು. ರಹಸ್ಯವಾಗಿ ನಡೆಯಬೇಕಾದ ಈ ಪ್ರಕ್ರಿಯೆಯ ಸೋರಿಕೆಯಾಗಬಾರದು ಎಂದು ಸುಪ್ರೀಂ ತೀರ್ಪಿನಲ್ಲಿ ತಿಳಿಸಿತ್ತು. ಮಾತ್ರವಲ್ಲದೇ ಈ ಸಂಧಾನ ಪ್ರಕ್ರಿಯೆಗಾಗಿ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ರವಿಶಂಕರ್ ಗುರೂಜಿ ಮತ್ತು ವಕೀಲ ಶ್ರೀರಾಮ್ ಪಂಚು ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿತ್ತು.
ಈ ಹಿನ್ನಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ , ನ್ಯಾಯಾಲಯದ ಆದೇಶದ ಬಳಿಕ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನ್ಯಾಯಾಲಯದ ಆದೇಶದ ಅಧಿಕೃತ ಪ್ರತಿ ನನಗಿನ್ನು ದೊರಕಿಲ್ಲ. ಶೀಘ್ರ ಪ್ರತಿ ಪಡೆಯಲು ಪ್ರಯತ್ನಿಸುತ್ತೇನೆ. ನ್ಯಾಯಾಲಯದ ನಿಯಮಾನುಸಾರ ಸ್ನೇಹ ಮತ್ತು ಸೌಹಾರ್ಧಯುತವಾಗಿ ಭೂ ವಿವಾದವನ್ನು ಸರಿಪಡಿಸಿಕೊಳ್ಳುತ್ತೇವೆ, ಒಂದು ವೇಳೆ ಈ ಸಂಬಂಧ ಅಗತ್ಯ ಬಂದರೆ ಸಾಂವಿಧಾನಿಕ ಪೀಠವನ್ನೇ ನೇರವಾಗಿ ಅವರ ಸಲಹೆಯನ್ನು ಕೇಳಿ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ