ನವದೆಹಲಿ, ಮಾ 09(MSP): ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ಕಡತಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದ ಕಳವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯೂಟರ್ನ್ ಹೊಡೆದಿದ್ದು, ರಫೇಲ್ ಒಪ್ಪಂದದ ದಾಖಲೆ ಕಳುವಾಗಿಲ್ಲ ಬದಲಿಗೆ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಕೋರ್ಟ್ ಗೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ರಹಸ್ಯ ದಾಖಲೆಗಳು ಕಳುವಾಗಿಲ್ಲ. ಆದರೆ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಅನಧಿಕೃತವಾಗಿ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸದ, ಹೊರಗಿನ ವ್ಯಕ್ತಿಗಳಿಗೆ ನೀಡಲಾಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ತಾವು ಮಂಡಿಸಿದ್ದ ವಾದವನ್ನು ತಪ್ಪಾಗಿ ಅರ್ಥೈಸಲಾಗಿದ್ದು, ದಾಖಲೆಗಳು ಕಳವಾಗಿದೆ ಎಂದು ನಾನು ಹೇಳಿಲ್ಲ. ಆದರೆ ದಾಖಲೆಗಳಲ್ಲಿನ ಮಾಹಿತಿಗಳನ್ನು ಫೋಟೋಕಾಪಿ ಮೂಲಕ ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದೆ ಎಂದು ಅಟಾರ್ನಿ ಜನರಲ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ಅವರು ಕೋರ್ಟ್ ನಲ್ಲಿ 'ಕಳವು' ಎಂಬ ಪದವನ್ನು ಹೇಳಿದ್ದರು. ಈ ಹೇಳಿಕೆಯನ್ನು ಆಧರಿಸಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕಡತ ಕಾಪಾಡಿಕೊಳ್ಳದವರು ದೇಶವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂದು ಪ್ರತಿಪಕ್ಷಗಳು ಲೇವಡಿ ಮಾಡಿತ್ತು. ಟೀಕೆಗಗಳ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ಕಡತಗಳು ದಾಖಲೆ ಕಳವಾಗಿಲ್ಲ ಎಂಬುದನ್ನು ಅಟಾರ್ನಿ ಜನರಲ್ ಅವರ ಮೂಲಕ ಹೇಳಿಸಿದೆ.