ನವದೆಹಲಿ, ಜ 17 (DaijiworldNews/DB): ದೆಹಲಿ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲ್ಯಾಂಡ್ ಪ್ರವಾಸಕ್ಕೆ ಕಳುಹಿಸುವ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ತಡೆಯೊಡ್ಡಿಯಿರುವುದು ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವಿನ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ದೆಹಲಿ ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮಾತನಾಡಿ, ನಮ್ಮ ತಲೆ ಮೇಲೆ ಎಲ್ಜಿ ಬಂದು ಕುಳಿತಿದ್ದಾರೆ. ನಮ್ಮ ರಾಜ್ಯದ ಮಕ್ಕಳ ಶಿಕ್ಷಣ ನಿರ್ಧರಿಸಲು ಅವರು ಯಾರು? ಯಾವುದೂ ಜೀವನದಲ್ಲಿ ಶಾಶ್ವತವಲ್ಲ. ನಾಳೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರಲೂಬಹುದು. ಆಗ ನಾವು ಈ ರೀತಿ ಕಿರುಕುಳ ಖಂಡಿತಾ ನೀಡಲಾರೆವು ಎಂದು ವಿ.ಕೆ. ಸಕ್ಸೇನಾ ವಿರುದ್ದ ಕಿಡಿ ಕಾರಿದ್ದಾರೆ.
ನಮ್ಮ ಹೋಂ ವರ್ಕ್ನ್ನು ಅವರು ಪರಿಶೀಲಿಸುವಷ್ಟು ನಮ್ಮ ಶಿಕ್ಷಕರು ಕೂಡಾ ನೋಡಿಲ್ಲ. ನಾನು ಚುನಾಯಿತ ಮುಖ್ಯಮಂತ್ರಿ. ನಮ್ಮ ಕೆಲಸವನ್ನು ನಿಯಂತ್ರಿಸುವ ಅಧಿಕಾರ ಅವರಿಗಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ನಡುವೆ ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಫಿನ್ಲ್ಯಾಂಡ್ಗೆ ತರಬೇತಿ ಪ್ರವಾಸವನ್ನು ಪ್ರಾಥಮಿಕ ಶಿಕ್ಷಕರಿಗೆ ಹಮ್ಮಿಕೊಂಡಿದ್ದನ್ನು ತಡೆದಿಲ್ಲ. ಇದಕ್ಕಾಗುವ ವೆಚ್ಚ ಮತ್ತು ಪ್ರಯೋಜನದ ಬಗ್ಗೆಯಷ್ಟೇ ಮಾಹಿತಿ ಕೇಳಿದ್ದೇನೆ ಎಂದಿದ್ದಾರೆ. ಆದರೆ ವೆಚ್ಚ ಕೇಳಲು ಅವರು ಯಾರು, ನನ್ನನ್ನು ಜನ ಆಯ್ಕೆ ಮಾಡಿ ಕಳುಹಿಸಿರುವುದು ಎಂದಿದ್ದಕ್ಕೆ, ತಮ್ಮನ್ನು ರಾಷ್ಟ್ರಪತಿ ಆಯ್ಕೆ ಮಾಡಿದ್ದಾಗಿ ಅವರು ಹೇಳುತ್ತಾರೆ ಎಂದು ಕೇಜ್ರೀವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ 104 ಸೀಟು ಬರಲು ಕಾರಣ ನಾನೇ ಎಂಬುದಾಗಿ ವಿ.ಕೆ. ಸಕ್ಸೇನಾ ಹೇಳಿಕೊಂಡಿದ್ದಾರೆ ಎಂದು ಕೇಜ್ರೀವಾಲ್ ದೂರಿದರು.