ನವದೆಹಲಿ, ಜ 17 ( DaijiworldNews/MS): ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ಅವರು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಡಿಸೆಂಬರ್ 10ರಂದು ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ವಿಮಾನ ಏರಿದ್ದರು. ಈ ವೇಳೆ ತುರ್ತು ನಿರ್ಗಮನ ದ್ವಾರದ ತೆರೆದಿದ್ದಾರೆ ಎನ್ನಲಾಗಿದೆ.
ವಿಮಾನದಲ್ಲಿ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸುತ್ತಿದ್ದಾಗ ತುರ್ತು ನಿರ್ಗಮನ ಕಾರ್ಯವಿಧಾನಗಳ ಬಗ್ಗೆಯೂ ವಿವರಿಸಲಾಯಿತು. ಈ ಸಂದರ್ಭ ತೇಜಸ್ವಿ ಸೂರ್ಯ ತುರ್ತು ನಿರ್ಗಮನ ದ್ವಾರ ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ತಕ್ಷಣ ಏರ್ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬಳಿಕ ವಿಮಾನ ಹಾರಾಟ ಆರಂಭಿಸಲು ಕನಿಷ್ಠ ಎರಡು ಗಂಟೆಗಳ ಕಾಲ ಬೇಕಾಯಿತು. ಈ ನಿಯಮ ಉಲ್ಲಂಘನೆಯಾಗಿರುವುದರಿಂದ ಕ್ಷಮೆಯಾಚಿಸಲು ಸಂಸದರನ್ನು ಕೋರಲಾಗಿದ್ದು, ಹಾಗಾಗಿ ಲಿಖಿತ ಪತ್ರದ ಮೂಲಕ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ ವಿಮಾನಯಾನ ಸಂಸ್ಥೆ ಸಂಸದ ತೇಜಸ್ವಿಗಾಗಿ ಪ್ರಯಾಣಿಕರ ಸುರಕ್ಷೆಯಲ್ಲಿ ರಾಜಿ ಮಾಡಿಕೊಂಡಿತೇ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಈ ವಿಚಾರವನ್ನು ಕೇಂದ್ರ ಸರಕಾರ ಮುಚ್ಚಿಟ್ಟಿದ್ದೇಕೆ ಎಂದು ಕಾಂಗ್ರೆಸ್ ಟ್ವಿಟರ್ನಲ್ಲಿ ಪ್ರಶ್ನಿಸಿದೆ.
"ಡಿ.10ರಂದು 6ಇ7339 ವಿಮಾನ ದಲ್ಲಿ ನಡೆದಿದ್ದೇನು? ವಿಮಾನಯಾನ ಸಚಿವಾಲಯದಿಂದ ಬಂದ ಒಂದು ಕರೆಯ ಬಳಿಕ ಎಲ್ಲವೂ ತಣ್ಣಗಾಗಿದ್ದೇಕೆ? ಒಬ್ಬನ ಅಚಾತುರ್ಯದಿಂದಾಗಿ 70 ಜನರ ಜೀವ ಕಳೆದುಕೊಳ್ಳಬೇಕಾಗಿತ್ತು’ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಟ್ವೀಟ್ ಮಾಡಿದ್ದಾರೆ.