ತಿರುವನಂತಪುರಂ, ಜ 18 (DaijiworldNews/HR): ನಟಿ ಅಮಲಾ ಪೌಲ್ ಅವರಿಗೆ ದೇವಸ್ಥಾನದ ಒಳಗೆ ಪ್ರವೇಶ ನಿರ್ಬಂಧಿಸಿದ್ದು, ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿದ್ದ ಅಮಲಾ ಪೌಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಮಲಾ ಅವರು ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇಗುಲಕ್ಕೆ ತೆರಳಿದ್ದು, ಅಲ್ಲಿನ ಆಡಳಿತ ಮಂಡಳಿಯು ನಟಿಯನ್ನು ದೇಗುಲದ ಗೇಟಿನ ಬಳಿಯೇ ತಡೆದಿದ್ದಾರೆ.
ಇನ್ನು 'ಈ ದೇಗುಲದೊಳಗೆ ಹಿಂದೂ ಧರ್ಮದವರ ಪ್ರವೇಶಕ್ಕೆ ಮಾತ್ರ ಅವಕಾಶವಿದೆ'. ಕ್ರಿಶ್ಚಿಯನ್ ಧರ್ಮದವರಾದ ಅಮಲಾ ಅವರಿಗೆ ದೇವರ ದರ್ಶನ ಪಡೆಯುವುದಕ್ಕೆ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿಲ್ಲ ಎನ್ನಲಾಗಿದೆ.
ಈ ವಿಚಾರವಾಗಿ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ದೇಗುಲದ ಪ್ರವಾಸಿಗರ ಡೈರಿಯಲ್ಲಿ ಇದೇ ವಿಚಾರವನ್ನು ಬರೆದು ಬಂದಿದ್ದಾರೆ. 'ನಾನು ಹಿಂದೂ ಅಲ್ಲ ಎನ್ನುವ ಕಾರಣಕ್ಕೆ ದೇವರ ದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ನಾನು ದೇವರ ದರ್ಶನ ಪಡೆಯದಿದ್ದರೂ ದೇವರ ಚೈತನ್ಯವನ್ನು ಅನುಭವಿಸಿದ್ದೇನೆ ಎಂದಿದ್ದಾರೆ.