ಕೋಝಿಕ್ಕೋಡ್, ಜ 17 ( DaijiworldNews/MS): ರೈಲಿನಲ್ಲಿ ಪ್ರಯಾಣಿಸುವಾಗ ಇಲಿ ಕಚ್ಚಿ ಗಾಯಗೊಂಡ ಪ್ರಯಾಣಿಕೆಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕೋಝಿಕ್ಕೋಡ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರತೀಯ ರೈಲ್ವೇಗೆ ಆದೇಶಿಸಿದೆ.
ದೂರುದಾರರಾದ ಚೋರೋಡ್ ನಿವಾಸಿ ಸ್ಯಾಲಿ ಜೇಮ್ಸ್ ಅವರು 2016 ರಲ್ಲಿ ಕಾಚೆಗುಡದಿಂದ ವಡಕರಕ್ಕೆ ರೈಲು ಪ್ರಯಾಣದ ಸಮಯದಲ್ಲಿ ಇಲಿ ಕಡಿತಕ್ಕೆ ಒಳಗಾಗಿದ್ದರು.
ರೈಲಿನಲ್ಲಿ ಮಲಗಿದ್ದ ಸಮಯದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಯ ಸಮಯದಲ್ಲಿ ಇಲಿಯೊಂದು ಆಕೆಯ ಎಡಗೈ ಕಚ್ಚಿತ್ತು.
ಇದರಿಂದ ಗಾಬರಿಯಾದ ಆಕೆ ಶೊರ್ನೂರ್ ನಿಲ್ದಾಣದಲ್ಲಿ ರೈಲು ನಿಂತಾಗ ಈ ವಿಚಾರವನ್ನು ಟಿಕೆಟ್ ಪರೀಕ್ಷಕರು (ಟಿಟಿಇ)ಗೆ ತಿಳಿಸಿದ್ದರು. ರೈಲ್ವೆ ಇಲಾಖೆಯ ವೈದ್ಯರು ಬಂದು ಇಂಟ್ರಾಡರ್ಮಲ್ ರೇಬೀಸ್ ಲಸಿಕೆಯನ್ನು ತೆಗೆದುಕೊಳ್ಳಲು ಸೂಚನೆ ನೀಡಿದ್ದರು. ಬಳಿಕ ವಡಕರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ದೂರುದಾರರು ಪ್ರಯಾಣಿಸಿದ ಎರಡನೇ ಎಸಿ ಕೋಚ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಇಲಿ ಹೊರಗಿನಿಂದ ಲಗೇಜ್ ಮೂಲಕ ಪ್ರವೇಶಿಸಿರಬಹುದು ಎಂದು ರೈಲ್ವೆ ಇಲಾಖೆ ವಾದಿಸಿತ್ತು. ಆದರೆ, ರೈಲ್ವೆಯ ನಿರ್ಲಕ್ಷ್ಯ ಮತ್ತು ಗುಣಮಟ್ಟವಿಲ್ಲದ ಸೇವೆಯಿಂದ ದೂರುದಾರರು ಇಲಿ ಕಡಿತಕ್ಕೆ ಒಳಗಾಗಿದ್ದಾರೆ ಎಂಬುದನ್ನು ಆಯೋಗ ಗಮನಿಸಿತ್ತು.
ಹೀಗಾಗಿ 20,000 ರೂ. ಪರಿಹಾರದ ಜೊತೆಗೆ, ಆಯೋಗವು ಆಕೆಯ ಚಿಕಿತ್ಸೆಯ ವೆಚ್ಚಕ್ಕೆ 1,000 ರೂ. ಮತ್ತು ಕಮಿಷನ್ ವೆಚ್ಚಕ್ಕಾಗಿ ರೂ. 2,000 ನೀಡುವಂತೆ ರೈಲ್ವೆಗೆ ನಿರ್ದೇಶನ ನೀಡಿದೆ.