ಬೆಂಗಳೂರು, ಜ 19 ( DaijiworldNews/MS): ಬಿಜೆಪಿ ಸರ್ಕಾರ ಆಡಳಿತ ನಡೆಸಲು ಪ್ರಾರಂಭವಾದಾಗಿನಿಂದ ವಿಧಾನಸೌಧದ ಗೋಡೆಗಳು ಕೂಡಾ ದುಡ್ಡು - ಕಾಸು ಅನ್ನುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಪಕ್ಷ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ, ಇವರು ಯಾವ ಯಾವ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಒಂದು ಸಾಕ್ಷಿ ಕೊಡಲಿ. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜ್ಯದಲ್ಲಿ ಸಾಕ್ಷಿ ಕೊಡುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಟೀಕಿಸಿದ್ದಾರೆ.
ವಿಧಾನಸೌಧದ ಗೋಡೆಗಳು ಕಾಸು ಕಾಸು ಅನ್ನುತ್ತಿವೆ. ಗೋಡೆಗಳಿಗೆ ಟಕ್ ಟಕ್ ಅಂತ ಹೊಡೆದರೆ ಕಾಸು ಕಾಸು ಅನ್ನುತ್ತಿವೆ. ಇದಕ್ಕಾಗಿ ಬಿಜೆಪಿ ಪಾಪದ ಪುರಾಣ ಪುಸ್ತಕ ಎಂದು ಪ್ರಜಾಧ್ವನಿ ಯಾತ್ರೆಯಲ್ಲಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳನ್ನು ಪುನರುಚ್ಚರಿಸಿದ ಅವರು , ಪ್ರತಿ ಕುಟುಂಬಕ್ಕೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಬೇಕು ಎಂದು ತೀರ್ಮಾನಿಸಿದ್ದೇವೆ. ಗೃಹಿಣಿಗೆ ವರ್ಷಕ್ಕೆ 24,000 ಸಾವಿರ ಕೊಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಅವರು ಘೋಷಣೆ ಮಾಡಿದ್ದಾರೆ. ಪ್ರತಿ ಮನೆಗೂ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಈ ವಿಚಾರ ಮುಟ್ಟಿಸಬೇಕು" ಎಂದು ಸೂಚನೆ ನೀಡಿದರು.