ಕಲಬುರ್ಗಿ, ಜ 19 ( DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಲ್ಯಾಣ ಕರ್ನಾಟಕದ ಕಲಬುರ್ಗಿಯ ಸೇಡಂ ತಾಲೂಕಿನ ಐತಿಹಾಸಿಕ ಸ್ಥಳವಾದ ಮಳಖೇಡದಲ್ಲಿ ಗಿನ್ನಿಸ್ ದಾಖಲೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ, ಯಾದಗರಿ, ರಾಯಚೂರು ಹಾಗೂ ಮುಂಬೈ ಕರ್ನಾಟಕದ ವಿಜಯಪುರ ಜಿಲ್ಲೆಯ ನಿವಾಸಿಗಳಿಗೆ ಒಟ್ಟು 50 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ನೀಡಲಾಗುತ್ತಿದೆ.
ಇದುವರೆಗೆ ಏಕಕಲದಲ್ಲಿ ಇಷ್ಟೊಂದು ಜನರಿಗೆ ಹಕ್ಕುಪತ್ರ ವಿತರಣೆಯಾಗದಿರುವ ಕಾರಣ ಇದು ಹೊಸ ದಾಖಲೆ ನಿರ್ಮಿಸಲಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಯಾದಗಿರಿ ಜಿಲ್ಲೆಯ ಕೊಡೆಕಲ್ ತೆರಳಿ ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಚೈನೈ-ಸುರತ್ ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿಯ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.
ನಂತರ ಮಧ್ಯಾಹ್ನ 2 ಗಂಟೆಗೆ ಸೇಡಂ ಜಿಲ್ಲೆಯ ಮಳಖೇಡಗೆ ಆಗಮಿಸಿ, ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಂಡ 342 ಗ್ರಾಮಗಳ 52,072 ಜನರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಿರುವರು.