ಯಾದಗಿರಿ, ಜ 19 ( DaijiworldNews/MS): ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕಕ್ಕೆ ಹಲವು ಡಬಲ್ ಉಪಯೋಗ ದೊರೆಯುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿ,ಅಭಿವೃದ್ಧಿ ಮಂತ್ರ ಜಪಿಸಿರುವ ಪ್ರಧಾನಿ ಮೋದಿ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಹವಾ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ.
ವಿವಿಧ ಯೋಜನೆಗಳಿಗೆ ಚಾಲನೆ ಕೊಟ್ಟು ಮಾತನಾಡಿದ ಮೋದಿ ತಮ್ಮ ಭಾಷಣದುದ್ದಕ್ಕೂ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮನೆ-ಮನೆಗೆ ಕುಡಿಯುವ ನೀರು, ರೈತರ ವಿಕಾಸ, ಅಪೌಷ್ಠಿಕತೆ ನಿರ್ಮೂಲನೆ, ಮೂಲಸೌಕರ್ಯ ಹೆಚ್ಚಿಸುವ ಭರವಸೆ ನೀಡಿದ್ದಾರೆ.
ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಿಂದಾಗಿ ಸಾಕಷ್ಟು ಅಭಿವೃದ್ಧಿಪರ ಯೋಜನೆ ಯಶಸ್ವಿಯಾಗಿ ಜಾರಿಯಾಗಿವೆ. ಇದಕ್ಕೆ ಉತ್ತಮ ಉದಾಹರಣೆ ಜಲಜೀವನ್ ಮಿಷನ್ ಯೋಜನೆ. ಕೇಂದ್ರ ಸರ್ಕಾರ ರೈತರಿಗೆ 6000 ಕೊಟ್ಟರೆ, ರಾಜ್ಯವೂ 4000 ಕೊಡುತ್ತಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ಅನೇಕ ಕಾರಿಡಾರ್ ಯೋಜನೆಗಳ ಲಾಭ ದೊರೆಯುತ್ತಿವೆ ಎಂದು ತಿಳಿಸಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಯಾಗಿಲ್ಲ ಎಂದು ವಿಪಕ್ಷಗಳ ವಿರುದ್ಧ ಕುಟುಕಿದ್ದಾರೆ.