ಬೆಂಗಳೂರು, ಜ 19 ( DaijiworldNews/MS): ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಯುವಕನೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಜೈಲು ಸೇರಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹೊಸಕಲ್ ನಾಯಕನಕಹಳ್ಳಿ ನಿವಾಸಿ ಪವನ್ (26) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿ ಜಾಮೀನು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ: ಆರೋಪಿಯು 14 ವರ್ಷದ ಸಂತ್ರಸ್ತೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರು ಆಧರಿಸಿ ಅರಸೀಕೆರೆ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಹೀಗಾಗಿ, ಆರೋಪಿ ಯುವಕನಿಗೆ ಹಾಸನದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್ ಮೇಟ್ಟಿಲೇರಿದ್ದ.
ಆರೋಪಿ ತನ್ನದೇ ಗ್ರಾಮದ ನಿವಾಸಿಯಾಗಿದ್ದು, ಜೈಲಿನಿಂದ ಹೊರಬಂದರೆ ಆ್ಯಸಿಡ್ ದಾಳಿ ನಡೆಸುವ ಭೀತಿಯಿದೆ. ಆದ್ದರಿಂದ ಜಾಮೀನು ಕೊಡಬಾರದು ಎಂದು ಬಾಲಕಿ ಮನವಿ ಮಾಡಿದ್ದಳು. ಇದನ್ನು ಪರಿಗಣಿಸಿದ ನ್ಯಾಯಪೀಠ, ಬಾಲಕಿಯ ಭಯ ನ್ಯಾಯಸಮ್ಮತವಾಗಿದೆ. ಒಂದೊಮ್ಮೆ ಆರೋಪಿ ಆ್ಯಸಿಡ್ ದಾಳಿ ಮಾಡಿದರೆ, ಅದರಿಂದ ಉಂಟಾಗುವ ನಷ್ಟವನ್ನು ಭರಿಸಲಾಗದು. ಆದ್ದರಿಂದ, ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ.