ನವದೆಹಲಿ, ಜ 19 (daijiworldNews/SM): ಗುರುವಾರ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಶೀತ ಅಲೆಗಳ ಪರಿಸ್ಥಿತಿ ಕಡಿಮೆಯಾಗಿದೆ. ಆದರೆ ಮುಂದಿನ ಐದು ದಿನಗಳಲ್ಲಿ ಮತ್ತೊಮ್ಮೆ ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ಹವಾಮಾನ ಇಲಾಖೆ ಹೇಳಿರುವ ಮಾಹಿತಿ ಪ್ರಕಾರ ಗುರುವಾರ ದಕ್ಷಿಣ ಹರಿಯಾಣ, ಪೂರ್ವ ರಾಜಸ್ಥಾನ, ಉತ್ತರ ಮಧ್ಯಪ್ರದೇಶ ಮತ್ತು ಬಿಹಾರದ ಹಲವೆಡೆ ಶೀತ ಅಲೆಯ ಪರಿಸ್ಥಿತಿಗಳು ಹೆಚ್ಚಳವಾಗಿವೆ ಎಂದು ತಿಳಿದು ಬಂದಿದೆ. ಉತ್ತರ ಮಧ್ಯಪ್ರದೇಶದ ಕೆಲವು ಭಾಗಗಳು ಮತ್ತು ಹರಿಯಾಣ ಮತ್ತು ಪೂರ್ವ ಉತ್ತರ ಪ್ರದೇಶದ ಪ್ರತ್ಯೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು 2 ರಿಂದ 5 ಡಿಗ್ರಿ ಸೆಲ್ಸಿಯಸ್ನಷ್ಟು ಇದೆ ಎಂದು ಅದು ಹೇಳಿದೆ.
ಮುಂದಿನ ಐದು ದಿನಗಳಲ್ಲಿ ಉತ್ತರ ಭಾರತದ ಕೆಲವೆಡೆ ಶೀತ ಅಲೆಗಳ ಪರಿಸ್ಥಿತಿ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಜನವರಿ 20 ರ ರಾತ್ರಿಯಿಂದ ಜನವರಿ 26 ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಜನವರಿ 23 ರಿಂದ ಜನವರಿ 25 ರವರೆಗೆ ವಾಯುವ್ಯ ಭಾರತದ ಬಯಲು ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅದು ಮಾಹಿತಿ ನೀಡಿದೆ.
ಜನವರಿ 20ರಿಂದ 22ರವರೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಮೇಲೆ ಲಘುವಾಗಿ ಸಾಧಾರಣ ಮಳೆ ಮತ್ತು ಹಿಮಪಾತದ ಸಾಧ್ಯತೆಯಿದೆ ಎನ್ನಲಾಗಿದೆ.