ಕಥುವಾ, ಜ 20 ( DaijiworldNews/MS): ಕೇವಲ ಟೀ ಶರ್ಟ್ ಧರಿಸಿ ಚಳಿಯನ್ನು ಎದುರಿಸುತ್ತಾ ಉತ್ತರ ಭಾರತದಲ್ಲಿ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಭಾರತ್ ಜೋಡೋ ಯಾತ್ರೆಯ ಕೊನೆಯ ಹಂತದಲ್ಲಿ ಮೊದಲ ಬಾರಿಗೆ ಜಾಕೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿರುವ ಲಖನ್ ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಜಾಕೆಟ್ ಧರಿಸಿದ್ದರು.
ಕನ್ಯಾಕುಮಾರಿಯಿಂದ ಆರಂಭವಾದ ಪಯಣದ ಇಲ್ಲಿಯವರೆಗೆಗೂ ಕೊರೆಯುವ ಚಳಿಯ ನಡುವೆಯೂ ರಾಹುಲ್ ಟೀ ಶರ್ಟ್ ಧರಿಸಿ ಪ್ರಯಾಣಿಸುತ್ತಿದ್ದರೂ ಕಥುವಾದಲ್ಲಿ ಮಳೆಯಿಂದಾಗಿ ರಾಹುಲ್ ಕಪ್ಪು ಜಾಕೆಟ್ ಧರಿಸಿದ್ದರು. ಯಾತ್ರೆಯು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಬೇಕಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಒಂದು ಗಂಟೆ ಹದಿನೈದು ನಿಮಿಷ ತಡವಾಗಿ ಪ್ರಾರಂಭವಾಯಿತು.
ಮಳೆ ಕಡಿಮೆ ಆದ ಬಳಿಕ ಅವರು ಜಾಕೆಟ್ ತೆಗೆದು, ಎಂದಿನಂತೆ ತಮ್ಮ ಬಿಳಿ ಬಣ್ಣದ ಟೀ ಶರ್ಟ್ನಲ್ಲಿ ನಡೆಯುತ್ತಿರುವುದು ಕಂಡುಬಂತು. ಇದುವರೆಗಿನ 125 ದಿನಗಳ ಪಯಣದಲ್ಲಿ 3,400 ಕಿಲೋಮೀಟರ್ಗಳ ಕಾಲ ರಾಹುಲ್ ಗಾಂಧಿಯವರ ಕನಿಷ್ಠ ಉಡುಪು ಅನೇಕರಿಂದ ಕುತೂಹಲ, ಮೆಚ್ಚುಗೆಯನ್ನು ಗಳಿಸಿದೆ. ಇದು ವಿರೋಧ ಪಕ್ಷಗಳಿಗೆ ಮಾತ್ರ ಇರಿಸು ಮುರಿಸು ತರಿಸಿದೆ.
ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಗುರುವಾರ ಸಂಜೆ ಪಂಜಾಬ್ ನಿಂದ ಜಮ್ಮು-ಕಾಶ್ಮೀರ ಪ್ರವೇಶಿಸಿದ್ದು, ಜನವರಿ 30ರಂದು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ.