ನವದೆಹಲಿ, ಜ 20 (DaijiworldNews/DB): ಚಳಿಗಾಲದಲ್ಲಿ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಜನ ನಾನಾ ಚಳಿಗಾಲದ ಧಿರಿಸುಗಳತ್ತ ಮೊರೆ ಹೋಗುತ್ತಾರೆ. ಇದೇ ಕಾರಣಕ್ಕಾಗಿ ವ್ಯಕ್ತಿಯೊಬ್ಬರು ಆನ್ಲೈನ್ ಶಾಪಿಂಗ್ ತಾಣದಲ್ಲಿ ಮಂಕಿ ಕ್ಯಾಪ್ಗಾಗಿ ಹುಡುಕಾಡಿದಾಗ ಅದರ ಬೆಲೆ 31,990 ರೂ. ಇರುವುದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಸದ್ಯ ನೆಟ್ಟಿಗರನ್ನು ಈ ಬೆಲೆ ನಗೆ ಗಡಲಲ್ಲಿ ತೇಲಾಡುವಂತೆ ಮಾಡಿದೆ.
ಚಳಿಗಾಲಕ್ಕೆಂದೇ ವಿಶೇಷವಾಗಿ ಧರಿಸುವ ಮಂಕಿ ಕ್ಯಾಪ್ ಚಳಿಯಿಂದ ರಕ್ಷಿಸಿಕೊಳ್ಳಲು ಉತ್ತಮ ಆಯ್ಕೆ ಕೂಡಾ. ಹೀಗಾಗಿಯೇ ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಜನ ಇದಕ್ಕಾಗಿ ಹುಡುಕಾಡುತ್ತಾರೆ. ಹೀಗೆ ವ್ಯಕ್ತಿಯೊಬ್ಬರು ಮಂಕಿ ಕ್ಯಾಪ್ ಹುಡುಕಾಡಿದಾಗ ಬ್ರಾಂಡೆಡ್ ಮಂಕಿ ಕ್ಯಾಪ್ ತರಗದ ಸ್ಕೀ ಮಾಸ್ಕ್ಗೆ 31,990 ರೂ. ದರ ವಿಧಿಸಿರುವುದು ಕಂಡು ಬಂದಿದೆ.
ಈ ವಿಚಾರವನ್ನು ಬೆಲೆ ಸಮೇತ ವ್ಯಕ್ತಿ ಟ್ವೀಟ್ ಮಾಡಿದ್ದು, ಮಂಕಿ ಕ್ಯಾಪ್ನ ಬೆಲೆಗೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.. ಅಲ್ಲದೆ, ಅದನ್ನೇ ಟ್ರೋಲ್ ಕೂಡಾ ಮಾಡಿ ನಕ್ಕಿದ್ದಾರೆ.
ಡೊಲ್ಸ್ ಆಂಡ್ ಗಬ್ಬಾನಾ ಖಾಕಿ ಸ್ಕೀ ಮಾಸ್ಕ್ ಕ್ಯಾಪ್ನ ಮೂಲ ಬೆಲೆ 40 ಸಾವಿರ ಆಗಿದ್ದು, ರಿಯಾಯಿತಿ ಸಹಿತ 31,990 ರೂ.ಗಳಿಗೆ ನೀಡಲಾಗುವುದು ಎಂದು ಕಂಪೆನಿ ಹಾಕಿಕೊಂಡಿದೆ. ಈ ಬೆಲೆಯನ್ನು ನೆಟ್ಟಿಗರು ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಮಂಕಿಕ್ಯಾಪ್ಗಳ ಬೆಲೆಯೊಂದಿಗೆ ಹೋಲಿಸಿ ಟ್ರೋಲ್ ಮಾಡಿದ್ದಾರೆ. ಇದೇ ಉತ್ಪನ್ನ ಸ್ಥಳೀಯ ಅಂಗಡಿಗಳಲ್ಲಿ 50 ರೂಪಾಯಿಗಳಿಗೆ ಸಿಗುತ್ತದೆ ಎಂದು ಬರೆದಿದ್ದಾರೆ.