ಹತ್ರಾಸ್, ಜ 20 (DaijiworldNews/HR): ಒಂಬತ್ತು ತಿಂಗಳ ಗರ್ಭಿಣಿಯೊಬ್ಬರು ತಮ್ಮ ರಕ್ತ ಪರೀಕ್ಷೆಯ ವರದಿಯನ್ನು ಕೊಂಡೊಯ್ಯಲಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿರುವ ಸಿಬ್ಬಂದಿಗಳು ಆಸ್ಪತ್ರೆಗೆ ಪ್ರವೇಶ ನಿರಾಕರಣೆ ಮಾಡಿದ್ದು, ಮಹಿಳೆಗೆ ತೀವ್ರ ಹೆರಿಗ ನೋವು ಕಾಣಿಸಿಕೊಂಡಿದ್ದರಿಂದ ಆಕೆ ಆಸ್ಪತ್ರೆಯ ಹೊರಗೆ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಕಲ್ಪನಾ ಎಂಬ ಮಹಿಳೆ ಆಸ್ಪತ್ರಗೆ ಹೆರಿಗೆಗೆ ಬಂದಿದ್ದು, ರಕ್ತ ಪರೀಕ್ಷೆಯ ವರದಿಯನ್ನು ತಂದಿರಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ಅಲ್ಲಿನ ಸಿಬ್ಬಂದಿಗಳು ವಾಪಸ್ ಕಳುಸಿದ್ದರು.
ಇನ್ನು ಈ ಆರೋಪಗಳನ್ನು ತಳ್ಳಿಹಾಕಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಶೆಲ್ಲಿ ಸಿಂಗ್, ಮಹಿಳೆಗೆ ಆಧಾರ್ನಂತಹ ಐಡಿಗಳನ್ನು ನೀಡುವಂತೆ ಕೇಳಲಾಯಿತು ಮತ್ತು ಆಸ್ಪತ್ರೆಯ ಪ್ರಸವಪೂರ್ವ ಕೋಣೆಗೆ ಹೋಗಲು ಸಲಹೆ ನೀಡಲಾಯಿತು. ಆದರೆ ಆಕೆ ಹೊರಗೆ ಹೋದರು ಎಂದಿದ್ದಾರೆ.
ಹೆರಿಗೆ ಬಳಿಕ ಮಹಿಳೆ ಮತ್ತು ಆಕೆಯ ಮಗುವನ್ನು ಹೆರಿಗೆ ವಾರ್ಡ್ಗೆ ಶಿಫ್ಟ ಮಾಡಲಾಗಿದ್ದು, ಇದೀಗ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.