ಚೆನ್ನೈ, ಜ 20 (DaijiworldNews/DB): ತಮಿಳುನಾಡು ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಿಎಂಕೆ ಮುಖಂಡ ಶಿವಾಜಿ ಕೃಷ್ಣಮೂರ್ತಿ ವಿರುದ್ದ ರಾಜ್ಯಪಾಲರ ಕಚೇರಿಯಿಂದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಚೆನ್ನೈ ನಗರ ಸರ್ಕಾರಿ ಅಭಿಯೋಜಕ ಜಿ. ದೇವರಾಜನ್ ಅವರು ರಾಜ್ಯಪಾಲರ ಪರವಾಗಿ ಚೆನ್ನೈ ಪ್ರಧಾನ ಸತ್ರ ನ್ಯಾಯಾಧೀಶ ಎಸ್.ಅಲ್ಲಿ ಅವರ ಬಳಿ ದೂರು ದಾಖಲು ಮಾಡಿದ್ದಾರೆ. ಭಾರತೀಯ ದಂಡಂಸಹಿತೆಯ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಶಿವಾಜಿ ವಿರುದ್ದ ದೂರು ದಾಖಲಾಗಿದೆ. ದೂರನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯೂ ಇದೆ.
ಶಿವಾಜಿ ವಿರುದ್ದ ದೂರು ನೀಡಿ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಚೆನ್ನೈ ನಗರ ಪೊಲೀಸ್ ಆಯುಕ್ತರ ಬಳಿ ರಾಜ್ಯಪಾಲರ ಉಪ ಕಾರ್ಯದರ್ಶಿ ಎಸ್.ಪ್ರಸನ್ನ ರಾಮಸ್ವಾಮಿಯವರು ಜನವರಿ 13ರಂದು ಕೋರಿದ್ದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಡಿಎಂಕೆ ಮುಖಂಡ ಶಿವಾಜಿ ಕೃಷ್ಣಮೂರ್ತಿ, ತಮಿಳುನಾಡು ರಾಜ್ಯಪಾಲರಿಗೆ ಸರ್ಕಾರ ಸಿದ್ದಪಡಿಸಿದ ಭಾಷಣ ಓದಲು ಸಾಧ್ಯವಾಗದಿದ್ದರೆ ಅವರು ಕಾಶ್ಮೀರಕ್ಕೆ ಹೋಗಲಿ. ನಾವು ಅವರನ್ನು ಗುಂಡಿಕ್ಕಿ ಕೊಲ್ಲಲು ಉಗ್ರರನ್ನು ಕಳುಹಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.