ನವದೆಹಲಿ, ಜ 20 (DaijiworldNews/DB): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಸಕ್ಸೇನಾ ಅವರ ವಿರುದ್ದ ಸಿಎಂ ಕೇಜ್ರೀವಾಲ್ ಮತ್ತು ಎಎಪಿ ಸದಸ್ಯರು ಮೆರವಣಿಗೆ ಹಮ್ಮಿಕೊಂಡ ಬೆನ್ನಲ್ಲೇ ಪತ್ರದ ಮುಖೇನ ಆರೋಪಗಳಿಗೆ ವಿ.ಕೆ. ಸಕ್ಸೇನಾ ಉತ್ತರಿಸಿದ್ದಾರೆ.
ಕೇಜ್ರೀವಾಲ್ ಆರೋಪಗಳು ದಾರಿ ತಪ್ಪಿಸುವ ರೀತಿಯಲ್ಲಿದೆ. ಅಲ್ಲದೆ ಅವಹೇಳನಕಾರಿ ಮತ್ತು ಕೀಳು ಮಟ್ಟದ ಆರೋಪಗಳನ್ನು ಅವರು ಮಾಡಿದ್ದಾರೆ ಎಂದು ವಿ.ಕೆ. ಸಕ್ಸೇನಾ ಹೇಳಿದ್ದಾರೆ.
ನನ್ನ ಭೇಟಿಗೆ ಕೇಜ್ರೀವಾಲ್ ಅವರಿಗೆ ಆಹ್ವಾನ ನೀಡಿದ್ದೆ. ಆದರೆ ಅವರು ಶಾಸಕರೊಂದಿಗೆ ಭೇಟಿಗೆ ಅವಕಾಶ ಕೋರಿದ್ದರು. ಆದರೆ ಸಮಯದ ಕೊರತೆ ಮತ್ತು ಸುಮಾರು 80 ಶಾಸಕರ ಏಕಾಏಕಿ ಒಟ್ಟಿಗೆ ಭೇಟಿ ನೀಡುವ ಹಿಂದಿನ ಕಾರಣ ತಿಳಿಸದ ಕಾರಣ ನಾನು ಅದಕ್ಕೆ ಅವಕಾಶ ನೀಡಿಲ್ಲ. ಆದರೆ ಭೇಟಿಗೆ ಅವಕಾಶ ನೀಡಿಲ್ಲ ಎಂಬುದಾಗಿ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೆ ಪರಿಹಾರ ಕಂಡುಕೊಳ್ಳುವುದಕ್ಕೆ ನನ್ನ ಭೇಟಿಯಾಗುವುದು ಬಿಟ್ಟು ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ ಎಂದೂ ಹೇಳಿದ್ದಾರೆ.
ಇನ್ನು ಲೆಫ್ಟಿನೆಂಟ್ ಗವರ್ನರ್ ಹೆಡ್ ಮಾಸ್ಟರ್ ತರ ವರ್ತಿಸುತ್ತಿದ್ದಾರೆ ಎಂದ ಕೇಜ್ರೀವಾಲ್ ಹೇಳಿಕೆಗೆ ತಿರುಗೇಟು ನೀಡಿದ ಸಕ್ಸೇನಾ, ನಾನು ಸಂವಿಧಾನದತ್ತವಾದ ಜನರ ಧ್ವನಿಯಾಗಿದ್ದೇನೆಯೇ ಹೊರತು ಹೆಡ್ ಮಾಸ್ಟರ್ನಂತೆ ವರ್ತಿಸಿಲ್ಲ ಎಂದಿದ್ದಾರೆ.
ಫಿನ್ಲ್ಯಾಂಡ್ ಪ್ರವಾಸಕ್ಕೆ ಶಿಕ್ಷಕರನ್ನು ತರಬೇತಿ ಸಲುವಾಗಿ ಕಳುಹಿಸಿಕೊಡುವ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್ ತಡೆ ನೀಡಿದ್ದಾರೆ ಎಂದು ಕೇಜ್ರೀವಾಲ್ ಆರೋಪಿಸಿದ್ದರು.