ನವದೆಹಲಿ, ಜ 20 ( DaijiworldNews/MS): ತಮ್ಮ ಸಾಕ್ಷ್ಯಚಿತ್ರದಲ್ಲಿ ಕಾಳಿ ಮಾತೆಯ ಒಂದು ಕೈಯಲ್ಲಿ ಸಿಗರೇಟು ಮತ್ತು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ ಕೊಟ್ಟ ಕಾರಣಕ್ಕಾಗಿ ತಮಿಳಿನ ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್ಐಆರ್ಗಳು ದಾಖಲಾಗಿತ್ತು.
ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸಿ, ರದ್ದುಗೊಳಿಸುವಂತೆ ಕೋರಿ ಲೀನಾ ಮಣಿಮೇಕಲೈ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಲೀನಾ ಮನವಿಯನ್ನು ಪರಿಗಣಿಸಿರುವ ಪೀಠವು ಕೇಂದ್ರ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಆಕೆಯ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿದೆ ಎಂಬುವುದನ್ನು ಗಮನಿಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರರ ವಿರುದ್ಧ ದಾಖಲಾದ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳಬಾರದು. ಈ ಹಂತದಲ್ಲಿ, ಅನೇಕ ಪ್ರಕರಣಗಳಡಿ ಎಫ್ಐಆರ್ಗಳನ್ನು ದಾಖಲಿಸುವುದು ಗಂಭೀರ ಪೂರ್ವಾಗ್ರಹ ಎನಿಸಿಕೊಳ್ಳಬಹುದು. ಕಾನೂನಿಗೆ ಅನುಸಾರವಾಗಿ ಎಲ್ಲಾ ಎಫ್ಐಆರ್ಗಳನ್ನು ಒಂದೇ ಸ್ಥಳದಲ್ಲಿ ಕ್ರೋಢೀಕರಿಸಲು ನೋಟಿಸ್ ನೀಡುತ್ತೇವೆ’ ಎಂದು ಪೀಠ ಹೇಳಿತು
ಲೀನಾ ಪರ ವಾದ ಮಂಡಿಸಿದ ವಕೀಲೆ ಕಾಮಿನಿ ಜೈಸ್ವಾಲ್, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಅವರಿಗಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಮೇಲೆ ದಾಖಲಾಗಿರುವ ಎಫ್ಐಆರ್ಗಳ ಕ್ರಿಮಿನಲ್ ಮೊಕದ್ದಮೆಗಳಿಗೆ ತಡೆಯಾಜ್ಞೆ ನೀಡುವಂತೆಯೂ ಲೀನಾ ಕೋರಿದ್ದಾರೆ.