ಘಾಜಿಪುರ( ಉತ್ತರ ಪ್ರದೇಶ), ಜ 20 (DaijiworldNews/DB): ಮೋದಿ ಸರ್ಕಾರವು ದೇಶದ ರಕ್ಷಣಾ ಕ್ಷೇತ್ರದ ವಿಚಾರದಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಣ್ಣಿಸಿದ್ದಾರೆ.
ಉತ್ತರ ಪ್ರದೇಶದ ಘಾಜಿಪುರದಲ್ಲಿ ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದ ಅಭಿವೃದ್ದಿಗಾಗಿ ಪ್ರಧಾನಿ ಮೋದಿ ನಿರಂತರವಾಗಿ ಶ್ರಮ ವಹಿಸುತ್ತಿದ್ದಾರೆ. ಹಲವಾರು ಗುರುತರ ಬದಲಾವಣೆಗಳನ್ನು ಈ ಕ್ಷೇತ್ರ ಕಂಡಿದೆ. ಇದೇ ಕಾರಣಕ್ಕಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವಾಗಿ ಭಾರತೀಯ ಸೈನ್ಯವು ಹೊರ ಹೊಮ್ಮಿದೆ ಎಂದರು.
ಸೇನೆ ಮತ್ತು ಗಡಿ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಭಾರತದಲ್ಲಾಗಿದೆ. ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಭಯೋತ್ಪಾದನೆಗೆ ಭಾರತ ವಿರುದ್ದವಾಗಿದೆ ಮತ್ತು ಅದನ್ನು ಸಹಿಸುವುದಿಲ್ಲ ಎಂಬ ಸಂದೇಶ ಇಡೀ ಜಗತ್ತಿಗೇ ಹೋಗಿದೆ. ಹೀಗಾಗಿಯೇ ಪಾಕಿಸ್ತಾನ ಜಾಗತಿಕ ವೇದಿಕೆಯಲ್ಲಿ ಪ್ರತ್ಯೇಕವಾಗಿದೆ ಎಂದವರು ತಿಳಿಸಿದರು.
ರಕ್ಷಣಾ ಸಾಮಾಗ್ರಿಗಳಿಗಾಗಿ ವಿದೇಶಗಳನ್ನು ಅವಲಂಬಿಸುತ್ತಿದ್ದ ಭಾರತ ಇಂದು ದೇಶದಲ್ಲೇ ಅವುಗಳನ್ನು ಉತ್ಪಾದಿಸುತ್ತಿದೆ. 300ಕ್ಕೂ ಅಧಿಕ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡುವ ಮೂಲಕ ರಫ್ತುದಾರ ದೇಶವಾಗಿಯೂ ಭಾರತ ಗುರುತಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್, ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಜೆ.ಪಿ. ನಡ್ಡಾ ವಿವರಿಸಿದರು.