ಬೆಂಗಳೂರು, ಜ 20 (DaijiworldNews/DB): ತಹಶೀಲ್ದಾರ್ ವಿತರಿಸಬೇಕಿದ್ದ ಹಕ್ಕುಪತ್ರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ವಿತರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ಹುದ್ದೆಯನ್ನು ತಹಶೀಲ್ದಾರ್ ಮಟ್ಟಕ್ಕೆ ಮುಖ್ಯಮಂತ್ರಿಗಳು ಇಳಿಸಿದ್ದಾರೆ ಎಂದರು.
ತಾಂಡಾ ಮತ್ತು ಹಟ್ಟಿಗಳ ವಾಸಿ ಕುಟುಂಬಗಳಿಗೆ ತಹಶೀಲ್ದಾರ್ ಅವರು ಈ ಹಕ್ಕುಪತ್ರಗಳನ್ನು ಯಾವತ್ತೋ ವಿತರಿಸಬೇಕಿತ್ತು. ಆದರೆ ರಾಜ್ಯದ ಮುಖ್ಯಮಂತ್ರಿಗಳು ಅವರ ಕೆಲಸವನ್ನು ಪ್ರಧಾನಿ ಕೈಯಿಂದ ಮಾಡಿಸಿದ್ದಾರೆ. ಜನಪರ ಆಡಳಿತ ವಿಚಾರದಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿರುವುದರಿಂದಲೇ ಇಂತಹ ಕೆಲಸಗಳಿಗೆ ಪ್ರಧಾನಿಯ ಆಗಮನದವರೆಗೂ ಕಾಯಬೇಕಾಗಿ ಬರುತ್ತದೆ. ಇದೆಲ್ಲಾ ಪ್ರಚಾರದ ಗಿಮಿಕ್ ಎಂದವರು ವ್ಯಂಗ್ಯವಾಡಿದರು.
ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆಗಾಗಿ ಕರ್ನಾಟಕ ಭೇಟಿ ವೇಳೆ ಸರ್ವಪಕ್ಷ ಸಭೆ ಕರೆಯಲು ನಮ್ಮ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ ಯಾವುದೇ ಸಭೆಯನ್ನೂ ಪ್ರಧಾನಿ ಕರೆಯಲಿಲ್ಲ. ಇಲ್ಲಿ ಮುಖ್ಯಮಂತ್ರಿಗಳು ಕುರ್ಚಿ ಭದ್ರ ಪಡಿಸಿಕೊಳ್ಳಲು ಪ್ರಧಾನಿ ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.