ನವದೆಹಲಿ, ಜ 21 (DaijiworldNews/DB): ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರನ್ನು ಕುಡಿದ ಮತ್ತಿನಲ್ಲಿ 15 ಮೀಟರ್ನಷ್ಟು ದೂರಕ್ಕೆ ಕಾರಿನಲ್ಲಿ ಎಳೆದೊಯ್ದ ಆರೋಪಿ ಹರೀಶ್ಚಂದ್ರ ಸೂರ್ಯವಂಶಿಯು ಸಂಗಮ್ ವಿಹಾರ್ನ ಎಎಪಿ ಕಾರ್ಯಕರ್ತ ಎಂಬುದಾಗಿ ಬಿಜೆಪಿ ಆರೋಪಿಸಿದೆ.
ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರೊಂದಿಗಿರುವ ಆರೋಪಿಯ ಚಿತ್ರವನ್ನು ಟ್ವೀಟ್ ಮಾಡಿರುವ ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್ದೇವ್, ಆತ ಪ್ರಚಾರದಲ್ಲಿ ತೊಡಗಿದ ಚಿತ್ರ ಇದಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ಮಹಿಳೆಯರಿಗೆ ರಾತ್ರಿ ವೇಳೆ ಎಷ್ಟು ಸುರಕ್ಷತೆ ಇದೆ ಎಂಬುದನ್ನು ಪರೀಕ್ಷಿಸಲು ಸ್ವಾತಿ ಮಾಲೀವಾಲ್ ಹೋಗಿದ್ದರು. ಆದರೆ ಇದೀಗ ರಾಷ್ಟ್ರ ರಾಜಧಾನಿಯು ಮಹಿಳೆಯರಿಗೆ ಅಸುರಕ್ಷಿತ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಆಮ್ ಆದ್ಮಿ ಪಕ್ಷದ ಪಿತೂರಿಯಂತೆ ಈ ಘಟನೆ ಕಾಣುತ್ತಿದೆ ಎಂದವರು ಜರೆದಿದ್ದಾರೆ.
ಗುರುವಾರ ನಡೆದ ಘಟನೆ ಬಳಿಕ ಸ್ವತಃ ಸ್ವಾತಿ ಮಾಲೀವಾಲ್ ಅವರೇ ಹೇಳಿಕೆ ನೀಡಿ, ಮಹಿಳಾ ಆಯೋಗದ ಅಧ್ಯಕ್ಷರಿಗೇ ದೆಹಲಿಯಲ್ಲಿ ಸುರಕ್ಷೆ ಇಲ್ಲವೆಂದಾದರೆ ಸಾಮಾನ್ಯ ಮಹಿಳೆಯರ ಕತೆಯೇನು ಎಂದು ಆತಂಕ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧಿಸಿ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ನ ನಿವಾಸಿ ಹರೀಶ್ ಚಂದ್ರ (47) ಎಂಬಾತನನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾರಿನ ಜಾಡು ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ (ದಕ್ಷಿಣ) ಚಂದನ್ ಚೌದರಿ ತಿಳಿಸಿದ್ದಾರೆ.