ನವದೆಹಲಿ, ಜ 21( DaijiworldNews/MS):ಆಧುನಿಕ ಭಾರತದ ಆತ್ಮನಿರ್ಭರದ ಪ್ರತೀಕವಾಗಿ ರಾಷ್ಟ್ರ ರಾಜಧಾನಿಯ ಸೆಂಟ್ರಲ್ ವಿಸ್ತಾದಲ್ಲಿ ನಿರ್ಮಾಣವಾಗಿರುವ ಭವ್ಯ ಸಂಸತ್ ಭವನದ ಫಸ್ಟ್ ಲುಕ್ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹೊಸ ಸಂಸತ್ತು ಈ ವರ್ಷದ ಮಾರ್ಚ್ನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ.ಕಳೆದ ವರ್ಷವಷ್ಟೇ , ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು.
ಕಳೆದ ಕೆಲವು ದಶಕಗಳಿಂದ ಕ್ಷೇತ್ರಗಳ ವಿಂಗಡಣೆಯಿಂದ ಚುನಾಯಿತ ಪ್ರತಿನಿಧಿಗಳು ಹೆಚ್ಚುತ್ತಿದ್ದು ಇದಕ್ಕೆ ಅನುಕೂಲವಾಗುವಂತೆ ಈ ಭವನ ನಿರ್ಮಾಣ ಮಾಡಲಾಗಿದೆ.
ಹೊಸ ಸಂಸತ್ತಿನಲ್ಲಿ ದೊಡ್ಡ ಸಭಾಂಗಣ, ಗ್ರಂಥಾಲಯ ಮತ್ತು ಅನುಕೂಲಕರ ಪಾರ್ಕಿಂಗ್ ಸ್ಥಳಗಳೊಂದಿಗೆ ಇದನ್ನು ನಿರ್ಮಿಸಲಾಗುತ್ತಿದ್ದು, ಸಭೆಗಾಗಿ ಕೊಠಡಿಗಳು ಮತ್ತು ಕಚೇರಿಗಳು ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ.
ಹೊಸ ಸಂಸತ್ತಿನಲ್ಲಿ ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ ವ್ಯವಸ್ಥೆ ಇದ್ದು, ಹೆಚ್ಚುವರಿ ಆಸನಗಳಿಗೆ (ತರಲು) ಸ್ಥಳಾವಕಾಶವಿರುತ್ತದೆ . ರಾಜ್ಯಸಭೆಯಲ್ಲಿ 384 ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.
ಅಲ್ಲದೇ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಒಟ್ಟು 1,224 ಸದಸ್ಯರಿಗೆ ಆಸನದ ವ್ಯವಸ್ಥೆ ಇರಲಿದೆ. ಅಲ್ಲದೇ ಪ್ರತಿಯೊಬ್ಬ ಸಂಸತ್ ಸದಸ್ಯನಿಗೂ 40 ಚ.ಮೀ ವಿಸ್ತೀರ್ಣದ ಕಚೇರಿಯನ್ನು ಹೊಂದುವ ಅವಕಾಶ ಕೂಡ ಕಲ್ಪಿಸಲಾಗುವುದು.
ಒಟ್ಟು 64,500 ಚ.ಮೀ. ವ್ಯಾಪ್ತಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ವಿಶಾಲ ಸಂಸತ್ ಭವನ ನಿರ್ಮಾಣವಾಗುತ್ತಿದ್ದು,ಇತ್ತೀಚಿನ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಸುರಕ್ಷತಾ ಉಪಕರಣಗಳು ಮತ್ತು ಎಲ್ಲಾ ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಅಳವಡಿಸಲಾಗುತ್ತಿದೆ.
ಹೊಸ ಸಂಸತ್ತಿನ ನಿರ್ಮಾಣಕ್ಕಾಗಿ ಈಗಿನಂತೆ 23 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.