ನವದೆಹಲಿ, ಜ 21 (DaijiworldNews/DB): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ದೇಶದಲ್ಲಿ ಕೋಮು ದ್ವೇಷ, ಭಯೋತ್ಪಾದನೆ ಚಟುವಟಿಕೆ ಸಹಿತ ಅಹಿತಕರ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಹೊಂದಿತ್ತಲ್ಲದೆ, ಅದಕ್ಕಾಗಿ ರಹಸ್ಯ ತಂಡಗಳನ್ನು ರಚಿಸಿಕೊಂಡಿತ್ತು. 2047ಕ್ಕೆ ದೇಶದಲ್ಲಿ ಇಸ್ಲಾಂ ಆಡಳಿತ ತರಬೇಕೆಂಬ ಮಹದಾಸೆ ಹೊಂದಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ತಂಡ ಬಯಲಿಗೆಳೆದಿದೆ.
ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಪಟ್ಟಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಎದುರು ರಾಷ್ಟ್ರೀಯ ತನಿಖಾ ತಂಡವು 20 ಪಿಎಫ್ಐ ಸದಸ್ಯರ ವಿರುದ್ಧ ನಿನ್ನೆ ಸಲ್ಲಿಸಿದ್ದ ಚಾರ್ಜ್ ಶೀಟ್ನಲ್ಲಿ ಈ ಅಂಶವನ್ನು ಬಹಿರಂಗಪಡಿಸಿದೆ.
ದೇಶದಲ್ಲಿ ಕೋಮು ದ್ವೇಷ ಹರಡುವುದು, ಭಯೋತ್ಪಾದನೆ ಚಟುವಟಿಕೆಯನ್ನು ಹೆಚ್ಚುಗೊಳಿಸುವುದು, ಸಮಾಜದ ಸ್ವಾಸ್ಥ್ಯ ಕೆಡಿಸುವುದು ಈ ನಿಷೇಧಿತ ಸಂಘಟನೆಯ ಉದ್ದೇಶವಾಗಿತ್ತು. 2047ಕ್ಕೆ ಭಾರತದಲ್ಲಿ ಇಸ್ಲಾಂ ಆಡಳಿತ ತರುವ ಉದ್ದೇಶ ಅದರದ್ದಾಗಿತ್ತು. ಇದಕ್ಕಾಗಿ ಸರ್ವೀಸ್ ಟೀಮ್ಸ್ ಮತ್ತು ಕಿಲ್ಲರ್ ಸ್ಕ್ವಾಡ್ ಎಂಬ ಗೌಪ್ಯ ತಂಡವನ್ನೂ ರಚಿಸಿಕೊಂಡಿತ್ತು. ತನ್ನ ಶತ್ರುಗಳನ್ನು ಕೊಲ್ಲುವ ಉದ್ದೇಶವನ್ನೂ ಈ ತಂಡಗಳ ಮೂಲಕ ಮಾಡುವ ಉದ್ದೇಶವನ್ನು ಸಂಘಟನೆ ಹೊಂದಿತ್ತು ಎಂಬ ವಿಚಾರವೂ ಬಹಿರಂಗಗೊಂಡಿದೆ.
ಶಸ್ತ್ರಾಸ್ತ್ರ, ಆಯುಧಗಳನ್ನು ಈ ತಂಡಗಳಿಗೆ ನೀಡಿ ದಾಳಿ ಹೇಗೆ ನಡೆಸಬೇಕು, ಹೇಗೆ ಕಣ್ಗಾವಲು ಇರಿಸಬೇಕು ಎಂಬೆಲ್ಲ ತರಬೇತಿಗಳನ್ನೂ ಪಿಎಫ್ಐ ಒದಗಿಸುತ್ತಿತ್ತು. ಪಿಎಫ್ಐ ಹಿರಿಯ ನಾಯಕರ ಸಲಹೆ, ಸೂಚನೆಗಳಿಗನುಗುಣವಾಗಿ ಈ ತಂಡಗಳ ಸದಸ್ಯರು ವಿಧ್ವಂಸಕ ಕೃತ್ಯಗಳನ್ನು ಎಸಗಬೇಕು ಎಂದೂ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರು ನಗರ, ಸುಳ್ಯ, ಬೆಳ್ಳಾರೆಯಲ್ಲಿ ರಹಸ್ಯ ಸಭೆಗಳೂ ನಡೆದಿದ್ದವು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಇನ್ನು ಸೇವಾ ತಂಡದ ದ.ಕ. ಜಿಲ್ಲಾ ಮುಖ್ಯಸ್ಥನಾಗಿದ್ದ ಮುಸ್ತಾಫ ಪೈಚಾರ್ ಎಂಬಾತ ಯಾರನ್ನು, ಯಾವ ಸಮುದಾಯವನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂಬ ವಿಚಾರವನ್ನು ಸೂಚಿಸಿದ್ದ ಎಂಬ ಆಘಾತಕಾರಿ ಮಾಹಿತಿಯನ್ನು ಎನ್ಐಎ ಹೇಳಿದೆ.
ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವಯೋಜಿತವಾಗಿತ್ತು. ಪಿಎಫ್ಐ ನಾಯಕರ ಸೂಚನೆ ಪ್ರಕಾರ ನಾಲ್ವರನ್ನು ಗುರ್ತಿಸಿ ಅವರ ಮೇಲೆ ದಾಳಿ ನಡೆಸುವ ಉದ್ದೇಶ ಇವರದಾಗಿತ್ತು. ಈ ಪೈಕಿ ಪ್ರವೀಣ್ ನೆಟ್ಟಾರು ಕೂಡಾ ಒಬ್ಬರಾಗಿದ್ದರು ಎನ್ನಲಾಗಿದೆ.
ಪಿಎಫ್ಐನ 20 ಮಂದಿಯ ವಿರುದ್ದ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಈ ಪೈಕಿ ತಲೆಮರೆಸಿಕೊಂಡಿರುವ ಆರು ಮಂದಿಯ ಬಂಧನಕ್ಕೆ ಸಹಕರಿಸಿದವರಿಗೆ ಮತ್ತು ಮಾಹಿತಿ ನೀಡಿದವರಿಗೆ ಪೊಲೀಸ್ ಇಲಾಖೆ ಈಗಾಗಲೇ ಬಹುಮಾನ ಘೋಷಿಸಿದೆ.