ಪಣಜಿ, ಜ 21 (DaijiworldNews/DB): ರಷ್ಯಾ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಉಜ್ಜೀಕಿಸ್ತಾನಕ್ಕೆ ತಿರುಗಿಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ವಿಮಾನವು 240 ಪ್ರಯಾಣಿಕರೊಂದಿಗೆ ಮಾಸ್ಕೋದಿಂದ ಹೊರಟಿತ್ತು. ಬೆಳಗ್ಗೆ 4.15ಕ್ಕೆ ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಲ್ಯಾಂಡ್ ಆಗಬೇಕಿತ್ತು. ಆದರೆ ಇದಕ್ಕೂ ಮುನ್ನ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಉಜ್ಜೀಕಿಸ್ತಾನಕ್ಕೆ ತಿರುಗಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ 12.30ಕ್ಕೆ ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಬಂದಿದ್ದು, ಈ ವಿಮಾನಕ್ಕೆ ಬಾಂಬ್ ಇಡಲಾಗಿದೆ ಎಂದು ಇಮೇಲ್ನಲ್ಲಿ ಉಲ್ಲೇಖಗೊಂಡಿತ್ತು. ಹೀಗಾಗಿ ಕೂಡಲೇ ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು ಎಂದು ಅವರು ವಿವರಿಸಿದ್ದಾರೆ.
ಮಾಸ್ಕೋ-ಗೋವಾ ನಡುವೆ ಸಂಚರಿಸುತ್ತಿದ್ದ ವಿಮಾನವೊಂದಕ್ಕೆ ಎರಡು ವಾರದ ಹಿಂದಷ್ಟೇ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಹೀಗಾಗಿ ಆ ವಿಮಾನವನ್ನು ಗುಜರಾತ್ನ ಜಾಮ್ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.