ಬೆಂಗಳೂರು, ಜ 21 (DaijiworldNews/DB): ಕರ್ನಾಟಕದಲ್ಲಿ ಕಾಂಗ್ರೆಸ್ನ್ನು ಸೋಲಿಸಲು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ 500 ಕೋಟಿ ರೂ. ಸುಪಾರಿ ಕೊಟ್ಟಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಸದ್ಯ ಈ ಆರೋಪ ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿದೆ.
ಇತ್ತೀಚೆಗೆ ತೆಲಂಗಾಣ ಸಿಎಂ ಕೆಸಿಆರ್ ಮತ್ತು ಕರ್ನಾಟಕ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿಯಾಗಿದ್ದರು. ಈ ಭೇಟಿಯ ಹಿಂದೆ 500 ಕೋಟಿ ರೂ. ಸುಪಾರಿಯ ಕತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಕಡಿಮೆ ಅಂತರದಲ್ಲಿ ಗೆಲ್ಲಬಹುದಾದ 25 ರಿಂದ 30 ಕ್ಷೇತ್ರಗಳಲ್ಲಿ ಆ ಪಕ್ಷವನ್ನು ಸೋಲಿಸಬೇಕು ಎಂದು ತೆಲಂಗಾಣ ಸಿಎಂ ಕರ್ನಾಟಕದ ಪ್ರಭಾವಿ ನಾಯಕನಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ತಮ್ಮ ಫಾರ್ಮ್ ಹೌಸ್ನಲ್ಲಿ ಚೌಕಾಸಿ ಮಾಡಿ ಕೆಸಿಆರ್ ಈ ಆಫರ್ ನೀಡಿದ್ದಾರೆ. ಇನ್ನು ಈ ಫಾರ್ಮ್ ಹೌಸ್ನಲ್ಲಿ ಮೂರು ಬಾರಿ ಮೀಟಿಂಗ್ ನಡೆದಿದ್ದು, ಆ ಪ್ರಭಾವಿ ನಾಯಕನ ವ್ಯಾಪಾರದ ಮೇಲೆಯೂ ಒತ್ತಡ ಪ್ರಯತ್ನ ನಡೆದಿದೆ ಎಂದಿದ್ದಾರೆ. ಸದ್ಯ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಮಾಡಿರುವ ಈ ಆರೋಪ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.
ಇನ್ನು ಜಮೀರ್ ತೆಲಂಗಾಣ ಭೇಟಿ ನೀಡಿದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ದೆಹಲಿಗೆ ಕರೆದು ಚರ್ಚೆ ನಡೆಸಿದ್ದರು.