ಬೆಂಗಳೂರು, ಜ 21 (DaijiworldNews/DB): ಕಾಂಗ್ರೆಸ್ನವರು ಅಥವಾ ಇನ್ಯಾರೋ ಪ್ರಶ್ನಿಸಿದರು ಎಂದ ಮಾತ್ರಕ್ಕೆ ಪದೇ ಪದೇ ಅವರಿಗೆ ಉತ್ತರಿಸುವ ಕೆಲಸ ಮಾಡಿ ಸಮಯ ವ್ಯರ್ಥ ಮಾಡಲಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ವಿಚಾರವಾಗಿ ತೇಜಸ್ವಿ ಸೂರ್ಯ ಕಾಲೆಳೆದ ಕಾಂಗ್ರೆಸ್ಗೆ ತಿರುಗೇಟು ನೀಡಿದ ಅವರು, ಈ ವಿಚಾರವಾಗಿ ಏರ್ಲೈನ್ಸ್ ಮತ್ತು ಡಿಜಿಸಿಎ ಈಗಾಗಲೇ ಸ್ಪಷ್ಟನೆ ನೀಡಿದೆ. ಅಣ್ಣಾಮಲೈ ಹಾಗೂ ಇತರ ಇಬ್ಬರು ಪ್ರಯಾಣಿಕರು ನನ್ನೊಂದಿಗೆ ಆ ವಿಮಾನದಲ್ಲಿ ಪ್ರಯಾಣಿಕರಾಗಿದ್ದರು. ಸ್ಪಷ್ಟೀಕರಣ ನೀಡಿದ ಮೇಲೆ ಕಾಂಗ್ರೆಸ್ಗೆ ಮತ್ತೆ ಮತ್ತೆ ಉತ್ತರಿಸಿ ಸಮಯ ವ್ಯರ್ಥ ಮಾಡುವುದಿಲ್ಲ ಎಂದಿದ್ದಾರೆ.
ಡಿಸೆಂಬರ್ 10ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಸಂಸದ ತೇಜಸ್ವಿ ಸೂರ್ಯ ತೆಗೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಯಾನ ಸಂಸ್ಥೆಯು ತೇಜಸ್ವಿ ಸೂರ್ಯ ಕ್ಷಮೆ ಯಾಚನೆಗೆ ಕೋರಿತ್ತು ಎಂದು ವರದಿಯಾಗಿದೆ. ಈ ಘಟನೆಯ ಕುರಿತು ಲೇವಡಿ ಮಾಡಿದ್ದ ರಾಜ್ಯ ಕಾಂಗ್ರೆಸ್, ಆಟ ಆಡುವ ಮಕ್ಕಳಿಗೆ ಯಜಮಾನಿಕೆ ನೀಡಿದರೆ ಏನಾಗಲಿದೆ ಎಂದು ತೇಜಸ್ವಿ ಸೂರ್ಯ ನಿದರ್ಶನ ಎಂದು ಜರೆದಿತ್ತು.