ನವದೆಹಲಿ, ಜ 21 (DaijiworldNews/DB): ಹಾತ್ ಸೆ ಹಾತ್ ಜೋಡೋ ಅಭಿಯಾನದ ಲಾಂಛನವನ್ನು ಕಾಂಗ್ರೆಸ್ ಶನಿವಾರ ಬಿಡುಗಡೆಗೊಳಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಆರೋಪ ಪಟ್ಟಿಯನ್ನೂ ಬಿಡುಗಡೆಗೊಳಿಸಿದೆ.
ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಾತ್ ಸೆ ಹಾತ್ ಜೋಡೋ ಅಭಿಯಾನ ಜನವರಿ 26ಕ್ಕೆ ಆರಂಭವಾಗಲಿದ್ದು, ಎರಡು ತಿಂಗಳ ಕಾಲ ನಡೆಯಲಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಮನೆಮನೆಗೆ ತಲುಪಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ಜನ ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಅವರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ. ಅಗತ್ಯವಿದ್ದಲ್ಲಿ ಪ್ರತಿ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯವರು ರಾಜ್ಯಗಳ ದುರಾಡಳಿತದ ವಿರುದ್ದವೂ ಚಾರ್ಜ್ಶೀಟ್ ತಯಾರಿಸಲಿದ್ದಾರೆ ಎಂದವರು ತಿಳಿಸಿದರು.
ಇನ್ನು ಜಮ್ಮು-ಕಾಶ್ಮೀರದ ಕತುವಾದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ಹಾತ್ ಸೆ ಹಾತ್ ಜೋಡೋ ಅಭಿಯಾನದಡಿ 6 ಲಕ್ಷ ಹಳ್ಳಿಗಳ ಮತ್ತು 2.5 ಲಕ್ಷ ಗ್ರಾಮ ಪಂಚಾಯತ್ ಗಳ 10 ಲಕ್ಷ ಮತಗಟ್ಟೆಗಳಿಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.