ನವದೆಹಲಿ, ಜ 21 (DaijiworldNews/DB): ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಅವರು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ.
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ. ಈಜಿಪ್ಟ್ ಸೇನೆಯ 180 ಸದಸ್ಯರ ಮಿಲಿಟರಿ ತುಕಡಿ ಕೂಡಾ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಲಿದೆ ಎಂದು ಸವಚಿವಾಲಯ ತಿಳಿಸಿದೆ.
ಅಲ್-ಸಿಸಿ ಜನವರಿ 24ರಂದೇ ಭಾರತಕ್ಕೆ ಆಗಮಿಸಲಿದ್ದು, ಮೂರು ದಿನಗಳ ಕಾಲ ಭಾರತದಲ್ಲಿರಲಿದ್ದಾರೆ. ಜನವರಿ 25ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಗುತ್ತದೆ. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವಾರ್ಥ ಔತಣಕೂಟವೂ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ, ವ್ಯಾಪಾರ ಸಮುದಾಯದೊಂದಿಗೆ ಸಂವಹನವೂ ಇರಲಿದೆ. ಐವರು ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೂ ಈಜಿಪ್ಟ್ ಪ್ರಧಾನಿಯವರೊಂದಿಗೆ ಆಗಮಿಸಲಿದೆ ಎಂದು ತಿಳಿದು ಬಂದಿದೆ.
ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಅಲ್-ಸಿಸಿ ಮತ್ತು ಮೋದಿಯವರು ಪರಸ್ಪರ ಚರ್ಚೆ ನಡೆಸಲಿದ್ದಾರೆ. ಇನ್ನು ಇದೇ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನೂ 2015ರ ಅಕ್ಟೋಬರ್ನಲ್ಲಿ ನಡೆದಿದ್ದ 3ನೇ ಭಾರತ-ಆಫ್ರಿಕಾ ವೇದಿಕೆ ಶೃಂಗಸಭೆಯಲ್ಲಿ ಈ ಹಿಂದೆ ಅಬ್ದೆಲ್ ಫತಾಹ್ ಅಲ್-ಸಿಸಿ ಅವರು ಭಾಗವಹಿಸಿದ್ದರು.