ವಿಜಯಪುರ, ಜ 21 (DaijiworldNews/DB): ಕಾಂಗ್ರೆಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮವಾದ ನಾಯಕ ಯಾರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಸಿಂದಗಿಯಲ್ಲಿ ಶನಿವಾರ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಯಂಕಾ, ನಾಣಿ, ಸೀಣಿ ಎಂದು ನಾಲ್ಕು ಮಂದಿ ಹೊರತುಪಡಿಸಿದರೆ ಕಾಂಗ್ರೆಸ್ನಲ್ಲಿ ಇನ್ಯಾರಿಲ್ಲ. ಮೋದಿಯವರಿಗೆ ಸಮನಾದ ನಾಯಕ ಇದ್ದರೆ ಕಾಂಗ್ರೆಸ್ ತೋರಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮೋದಿ ಬಗ್ಗೆ ಸುಳ್ಳು ಹರಡುವುದರಲ್ಲಿ ತೊಡಗಿದ್ದಾರೆ. ಆದರೆ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಇರುವುದಿಲ್ಲ. ಎಲ್ಲಿದ್ದೀಯಪ್ಪಾ ಕಾಂಗ್ರೆಸ್? ನಿಮ್ಮ ನಾಯಕ ಎಲ್ಲಿ ಎಂದು ಕೇಳುವ ಕಾಲ ಬರಲಿದೆ ಎಂದರು.
ಮುಂದಿನ ಮುಖ್ಯಮಂತ್ರಿ ನಾನೇ ಎಂಬುದಾಗಿ ಕೆಲವರು ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ ಆ ಕನಸು ನನಸಾಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಮೋದಿ, ನಡ್ಡಾ, ಅಮಿತ್ ಶಾ ಮುಂದಾಳತ್ವದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರುವುದು ಖಂಡಿತಾ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸುವುದಕ್ಕಾಗಿ ಪ್ರತಿ ಕಾರ್ಯಕರ್ತ ತೊಡಗಿಸಿಕೊಳ್ಳಬೇಕು. ಮನೆಮನೆಗೆ ಹೋಗಿ ಪಕ್ಷದ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದವರು ಇದೇ ವೇಳೆ ಕರೆ ನೀಡಿದರು.