ನವದೆಹಲಿ, ಜ 21 (DaijiworldNews/DB): ಕುಸ್ತಿ ಪಟುಗಳು ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರ ವಿರುದ್ದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜಕೀಯ ಅಂಶ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಆದರೆ ಪ್ರತಿಭಟನೆಯಲ್ಲಿ ಇತರ ಅಂಶಗಳು ಕಡಿಮೆ ಇದೆ. ರಾಜಕೀಯ ಅಂಶವೇ ಎದ್ದು ಕಾಣುತ್ತಿದೆ ಎಂದರು.
ಮಹಿಳಾ ಕುಸ್ತಿಪಟುಗಳು ಡಬ್ಲ್ಯುಎಫ್ಅಐ ಅಧ್ಯಕ್ಷರು ಹಾಗೂ ತರಬೇತುದಾರರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಒಲಂಪಿಕ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ) ಪದಕ ವಿಜೇತರೂ ಸೇರಿದಂತೆ ಕುಸ್ತಿ ಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ತನಿಖೆ ಪೂರ್ಣಗೊಳ್ಳುವವರೆಗೂ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಡಬ್ಲ್ಯುಎಫ್ಐ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಶನಿವಾರ ಬೆಳಗ್ಗೆ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ತನಿಖೆಗಾಗಿ ಮೇಲ್ವಿಚಾರಣ ಸಮಿತಿ ರಚಿಸಲಾಗುವುದು. ಮುಂದಿನ ಒಂದು ತಿಂಗಳೊಳಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.