ಮೈಸೂರು, ಜ 21 (DaijiworldNews/DB): ತೆಲಂಗಾಣ ಮುಖ್ಯಮಂತ್ರಿಯವರನ್ನು ನಾನು ಭೇಟಿಯಾಗಿರುವುದು ನಿಜ. ಆದರೆ 500 ಕೋಟಿ ಆಫರ್ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ನ್ನು ಸೋಲಿಸಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ 500 ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂಬ ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪ ಕುರಿತು ಪ್ರತಿಕ್ರಿಯಿಸಿದ ಜಮೀರ್, ಹೈದರಾಬಾದ್ಗೆ ಹೋಗಿದ್ದಾಗ ಕೆಸಿಆರ್ ಭೇಟಿ ಮಾಡಿದ್ದೆ. ಆದರೆ ರಾಜಕೀಯ ವಿಚಾರದ ಬಗ್ಗೆ ಈ ಭೇಟಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನನ್ನ ಸ್ನೇಹಿತ, ತಾಂಡೂರು ಶಾಸಕ ರೋಹಿತ್ ರೆಡ್ಡಿ ಅವರು ಸಿಎಂ ಕೆಸಿಆರ್ ಭೇಟಿ ಮಾಡಲು ಹೇಳಿದ್ದಕ್ಕೆ ಹೋಗಿದ್ದೇನೆ. ಯಾವುದೇ ಆಪರ್ ನನಗೆ ಬಂದಿಲ್ಲ ಎಂದರು.
ಕೆಸಿಆರ್ ಅವರನ್ನು ಹಲವರು ಭೇಟಿ ಮಾಡುತ್ತಾರೆ. ಆದರೆ ನಾನು ಭೇಟಿಯಾಗಿದ್ದಕ್ಕೆ ವೃಥಾ ಕಲ್ಪಿಸಲಾಗುತ್ತಿದೆ. ಕಾಂಗ್ರೆಸ್ನ್ನು ಕರ್ನಾಟಕದಲ್ಲಿ ಸೋಲಿಸಿದರೆ ಅವರಿಗೆ ಏನು ಸಿಗುತ್ತದೆ? ಹೈದರಾಬಾದ್ನ ನಮ್ಮ ಪಕ್ಷದ ಅಧ್ಯಕ್ಷರು ನನ್ನ ಮೇಲೆ ಆರೋಪ ಮಾಡಿದ್ದಾರಾ? ಆರೋಪ ಮಾಡಿದವರನ್ನೇ ಕೇಳಿ ಎಂದು ಜಮೀರ್ ಹೇಳಿದರು.