ನವದೆಹಲಿ, ಜ 22 (DaijiworldNews/DB): ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರನ್ನು ಕಾರಿನಲ್ಲಿ 15 ಮೀಟರ್ಗಳಷ್ಟು ದೂರ ಎಳೆದೊಯ್ದು ಬಂಧಿಸಲ್ಪಟ್ಟಿದ್ದ ವ್ಯಕ್ತಿಗೆ ಇದೀಗ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿದೆ.
ದೆಹಲಿಯಲ್ಲಿ ರಾತ್ರಿ ಹೊತ್ತು ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷಿಸಲು ಹೋಗಿದ್ದ ಸ್ವಾತಿ ಮಲಿವಾಲ್ ಅವರನ್ನು ಏಮ್ಸ್ ನ ಹೊರ ಭಾಗದಲ್ಲಿ ರಾತ್ರಿ 3 ಗಂಟೆಗೆ ಕುಡಿತದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಹರೀಶ್ ಚಂದ್ರ ಎಂಬಾತ ಸುಮಾರು 15 ಮೀಟರ್ಗಳಷ್ಟು ದೂರ ಕಾರಿನಲ್ಲಿ ಎಳೆದೊಯ್ದಿದ್ದ. ಇದಕ್ಕೂ ಮುನ್ನ ಕಾರಿನ ಕಿಟಕಿಗೆ ನನ್ನ ಕೈ ಸಿಲುಕಿಕೊಂಡಿತ್ತು ಎಂದು ಸ್ವಾತಿ ಆರೋಪಿಸಿದ್ದರು. ಹೀಗಾಗಿ ಆರೋಪಿನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆರೋಪಿ ವಿರುದ್ದ ದಾಖಲಾಗಿರುವ ಪ್ರಕರಣಗಳು ಜಾಮೀನು ನೀಡಬಹುದಾದ ಪ್ರಕರಣಗಳಾಗಿವೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದೆ. ಇನ್ನು 50,000 ರೂಪಾಯಿ ಶೂರಿಟಿ ಬಾಂಡ್ ಸಲ್ಲಿಸಲು ಹರೀಶ್ಚಂದ್ರಗೆ ಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ಅಗತ್ಯಬಿದ್ದಾಗ ವಿಚಾರಣೆಗೆ ಹಾಜರಾಗುವುದು, ಮುಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗದಿರುವುದು, ಸಾಕ್ಷ್ಯ ನಾಶ ಮಾಡದಿರುವುದು, ಒತ್ತಡ ಹೇರದಿರುವುದು ಮುಂತಾದ ಷರತ್ತುಗಳೊಂದಿಗೆ ಆರೋಪಿಗೆ ಜಾಮೀನು ನೀಡಲಾಗಿದೆ.