ಲಕ್ನೋ, ಜ 22 (DaijiworldNews/DB): ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾದ ವ್ಯಕ್ತಿಯೊಬ್ಬನಿಗೆ ಇದೀಗ ಹೊಸ ಫಜೀತಿ ಎದುರಾಗಿದೆ. ವಿಚಿತ್ರ ಒಪ್ಪಂದವೊಂದರ ಪ್ರಕಾರ ವಾರದಲ್ಲಿ ಮೂರುದಿನ ಮೊದಲ ಪತ್ನಿಯೊಂದಿಗೆ, ಮೂರು ದಿನ ಎರಡನೇ ಪತ್ನಿಯೊಂದಿಗೆ ತಂಗುವ ಅನಿವಾರ್ಯ ಎದುರಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ವ್ಯಕ್ತಿಯೊಬ್ಬ ವ್ಯಕ್ತಿಯೊಬ್ಬ ಎರಡು ಮದುವೆಯಾಗಿದ್ದು, ಈತ ಎರಡು ಮದುವೆಯಾಗಿರುವುದು ಪರಸ್ಪರ ಎರಡೂ ಪತ್ನಿಯರಿಗೂ ತಿಳಿದಿರಲಿಲ್ಲ. ಮೊದಲ ಪತ್ನಿ ಅತ್ತೆ, ಮಾವನೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದು, 2017ರಲ್ಲಿ ಎರಡನೇ ಮದುವೆಯಾಗಿದ್ದು, ಎರಡನೇ ಪತ್ನಿಯನ್ನು ಆತ ತನ್ನ ಮನೆಗೆ ಕರೆದೊಯ್ಯದೆ ಬಾಡಿಗೆ ಮನೆಯಲ್ಲೇ ಇರಿಸಿದ್ದ. ಹೀಗಾಗಿ ಆಕೆ ಪೋಷಕರ ಮನೆಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದರೂ ಆತ ಸಬೂಬು ನೀಡಿ ತಪ್ಪಿಸಿಕೊಳ್ಳುತ್ತಿದ್ದ. ಹೀಗಾಗಿ ಆಕೆ ತನ್ನ ಪತಿಯ ಮನೆಯನ್ನು ಉಪಾಯವಾಗಿ ಹುಡುಕಿ ಅಲ್ಲಿಗೆ ಹೋಗಿದ್ದಾಳೆ. ಈ ವೇಳೆ ಆತನಿಗೆ ಮೊದಲೇ ಮದುವೆ ಆಗಿರುವ ವಿಷಯ ಆಕೆಗೆ ಗೊತ್ತಾಗಿದೆ. ಅಲ್ಲದೆ, ಮೊದಲ ಪತ್ನಿಗೆ ಮೂರು ಮಕ್ಕಳಿರುವ ಬಗ್ಗೆಯೂ ಗೊತ್ತಾಗಿದೆ. ಹೀಗಾಗಿ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪೊಲೀಸರು ಪ್ರಕರಣವನ್ನು ಕೌನ್ಸೆಲಿಂಗ್ಗಾಗಿ ನಾರಿ ಉತ್ಥಾನ್ ಕೇಂದ್ರಕ್ಕೆ ವರ್ಗಾಯಿಸಿದ್ದು, ಅಲ್ಲಿ ನಡೆದ ಒಪ್ಪಂದದ ಪ್ರಕಾರ ಸೋಮವಾರದಿಂದ ಬುಧವಾರದವರೆಗೆ ಮೊದಲ ಪತ್ನಿಯೊಂದಿಗೆ, ಗುರುವಾರದಿಂದ ಶನಿವಾರದವರೆಗೆ ಎರಡನೇ ಪತ್ನಿಯೊಂದಿಗೆ ಇರಬೇಕೆಂದು ಸೂಚಿಸಲಾಗಿದೆ. ಅಲ್ಲದೆ ಇಬ್ಬರು ಪತ್ನಿಯರೂ ಅತ್ತೆ, ಮಾವಂದಿರೊಂದಿಗೇ ಇರಬೇಕೆಂದು ಒಪ್ಪಂದವಾಗಿದೆ. ಬಳಿಕ ಮೂವರೂ ಒಟ್ಟಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.