ಶ್ರೀನಗರ, ಜ 22 (DaijiworldNews/DB): ದೇಶದ ಪ್ರಧಾನಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮರ್ಥರಾಗಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸೈದ್ದಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ತಮ್ಮ ನಾಯಕತ್ವ ಗುಣಗಳನ್ನು ಅವರು ದೇಶಕ್ಕೇ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಬಿಜೆಪಿಗೆ ಖಂಡಿತಾ ಸವಾಲಾಗಿದ್ದಾರೆ. ಅವರು ಪ್ರಧಾನಿ ಹುದ್ದೆಗೆ ಅರ್ಹರು ಎಂದರು.
ದೇಶದಲ್ಲಿರುವ ಭಯ, ದ್ವೇಷ ಹೋಗಲಾಡಿಸಿ ಪ್ರೀತಿ ತುಂಬುವುದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಕೈಗೊಂಡಿರುವ ಯಾತ್ರೆಯ ಪ್ರಮುಖ ಉದ್ದೇಶ. 3,500 ಕಿ.ಮೀ.ಗಳಷ್ಟು ಸುದೀರ್ಘ ಪಾದಯಾತ್ರೆ ಮಾಡಲು ಎಲ್ಲರಿಂದಲೂ ಅಸಾಧ್ಯ. ಅದಕ್ಕೆ ದೃಢ ಸಂಕಲ್ಪ ಮತ್ತು ಧೈರ್ಯ ಬೇಕು. ರಾಜಕೀಯಕ್ಕಾಗಲೀ, ವಿಪಕ್ಷಗಳ ಒಗ್ಗೂಡಿಸುವಿಕೆಗಾಗಲೀ ನಡೆಯುವ ಯಾತ್ರೆ ಇದಲ್ಲ ಎಂದವರು ಸ್ಪಷ್ಟಪಡಿಸಿದರು.
ಬಿಜೆಪಿ ದೊಡ್ಡ ಪಕ್ಷವೇ ಆದರೂ, ಕೆಲವು ರಾಜ್ಯಗಳನ್ನು ಹೊರತುಪಡಿಸಿ ಬೇರೆ ಕಡೆ ಇತರ ಪಕ್ಷಗಳನ್ನೇ ಅವಲಂಬಿಸಿದೆ ಎಂದೂ ಅವರು ತಿಳಿಸಿದರು.