ಭೋಪಾಲ್, ಜ 22 (DaijiworldNews/DB): ಮಧ್ಯಪ್ರದೇಶ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಾಜಿ ಸಿಎಂ ಕಮಲನಾಥ್ ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲರ ಖಾತೆ ತೆರೆಯಲಾಗುವುದು ಎಂದು ಪೊಲೀಸರನ್ನುದ್ದೇಶಿಸಿ ಹೇಳಿದ್ದಾರೆ.
ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿದ ಕಮಲನಾಥ್, ಮುಂದಿನ ಎಂಟು ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಆದರೆ ಎಲ್ಲಾ ಪೊಲೀಸ್ ಅಧಿಕಾರಿಗಳು ಸರಿಯಾಗಿ ಕೇಳಿಸಿಕೊಳ್ಳಿ. ಮುಂದಿನ ಚುನಾವಣೆಯಲ್ಲಿ ಎಲ್ಲರ ಖಾತೆ ತೆರೆಯಲಾಗುವುದು ಎಂದಿದ್ದಾರೆ.
ಇನ್ನು ಕಮಲನಾಥ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ತಮ್ಮ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ಕಮಲನಾಥ್ ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಜರೆದಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ಕಮಲನಾಥ್ ಅವರು ಬೆದರಿಕೆ ಹಾಕುತ್ತಿರುವ ಪ್ರಯತ್ನ ಇದೇ ಮೊದಲಲ್ಲ. ಈ ಹಿಂದೆ 2021ರ ಆಗಸ್ಟ್ನಲ್ಲಿ ಆಗ್ ಲಗಾ ದೋ ಎಂದು ಹೇಳಿಕೆ ನೀಡಿದ್ದರು ಎಂದು ಪೂನಾವಾಲ ಹೇಳಿದ್ದಾರೆ.