ಗುವಾಹಟಿ, ಜ 22 (DaijiworldNews/DB): ನಟ ಶಾರುಖ್ ಖಾನ್ ಅವರು ಇಂದು ನಸುಕಿನ ವೇಳೆಗೆ ನನಗೆ ಕರೆ ಮಾಡಿ ಪಠಾಣ್ ಚಿತ್ರದ ಬಗ್ಗೆ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಅವರು, ನಸುಕಿನ ವೇಳೆ 2 ಗಂಟೆಗೆ ಶಾರುಖ್ ನನಗೆ ಕರೆ ಮಾಡಿದ್ದರು. ಚಿತ್ರ ಪ್ರದರ್ಶನ ವೇಳೆ ಗುವಾಹಟಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಅವರು ಆತಂಕಿತಗೊಂಡಿದ್ದರು. ಆದರೆ ಪಠಾಣ್ ಚಿತ್ರ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಸರ್ಕಾರ ವಿಚಾರಣೆ ನಡೆಸಲಿದೆ. ಮತ್ತೆ ಇಂತಹ ಘಟನೆ ಮರು ಕಳಿಸದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸುಸ್ಥಿತಿಯಲ್ಲಿಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಈಗಾಗಲೇ ನಡೆದಿರುವ ಪ್ರತಿಭಟನೆ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಅವರಿಗೆ ಧೈರ್ಯ ತುಂಬಿರುವುದಾಗಿ ಶರ್ಮಾ ಟ್ವೀಟ್ ಮಾಡಿದ್ದಾರೆ.
ಆದರೆ ನಿನ್ನೆ ಇದೇ ಪ್ರತಿಭಟನೆ ಕುರಿತು ಸುದ್ದಿಗಾರರು ಅಸ್ಸಾಂ ಸಿಎಂ ಅವರನ್ನು ಪ್ರಶ್ನಿಸಿದಾಗ, ಶಾರುಖ್ ಖಾನ್ ಯಾರು? ಅವರ ಪಠಾನ್ ಚಿತ್ರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದರು. ಇದೀಗ ನಿನ್ನೆ ಶಾರುಖ್ ಖಾನ್ ಯಾರೆಂದು ಕೇಳಿದ್ದ ಅಸ್ಸಾಂ ಸಿಎಂ ಅವರ ವೀಡಿಯೋ ಮತ್ತು ಇಂದಿನ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಎಂ ಯು ಟರ್ನ್ ಹೊಡೆದಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಪಠಾಣ್ ಚಿತ್ರ ಪ್ರದರ್ಶನ ಮಾಡದಂತೆ ಆಗ್ರಹಿಸಿ ಗುವಾಹಟಿ ಸೇರಿದಂತೆ ರಾಜ್ಯದ ವಿವಿಧೆಡೆ ಬಜರಂಗದಳ ಕಾರ್ಯಕರ್ತರು ಮತ್ತು ಬಲಪಂಥೀಯ ಗುಂಪಿನ ಸ್ವಯಂ ಸೇವಕರು ಚಿತ್ರದ ಪೋಸ್ಟರ್ಗಳನ್ನು ಹರಿದು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದರು.