ನವದೆಹಲಿ, ಜ 22 (DaijiworldNews/DB): ದೆಹಲಿಯಲ್ಲಿ ತನ್ನ ಲಿವ್ ಇನ್ ಸಂಗಾತಿ ಶ್ರದ್ದಾ ವಾಕರ್ ಳನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ವಿರುದ್ದ ದೆಹಲಿ ಪೊಲೀಸರು 3,000 ಪುಟಗಳ ಚಾರ್ಜ್ಶೀಟ್ ಸಿದ್ಧಪಡಿಸಿದ್ದಾರೆ.
ಫೋರೆನ್ಸಿಕ್ ಸಾಕ್ಷ್ಯಗಳು, 100ಕ್ಕೂ ಅಧಿಕ ಸಾಕ್ಷಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚಾರ್ಜ್ಶೀಟ್ನಲ್ಲಿದೆ. ಅಫ್ತಾಬ್ ತಪ್ಪೊಪ್ಪಿಗೆ, ನಾರ್ಕೋ ಪರೀಕ್ಷೆಯ ಫಲಿತಾಂಶ, ಫೊರೆನ್ಸಿಕ್ ವರದಿಯನ್ನೂ ಉಲ್ಲೇಖಿಸಲಾಗಿದೆ. ಕಾನೂನು ತಜ್ಞರು ಇದನ್ನು ಪರಿಶೀಲಿಸುತ್ತಿದ್ದಾರೆ.
ಇನ್ನು ಕಳೆದ ಡಿಸೆಂಬರ್ನಲ್ಲಿ ಅಫ್ತಾಬ್ ಮತ್ತು ಶ್ರದ್ದಾ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಪೊಲೀಸರಿಗೆ ಲಭಿಸಿದ್ದು, ಆಕೆಯೊಂದಿಗೆ ಅಫ್ತಾಬ್ ಜಗಳವಾಡುತ್ತಿರುವ ಆಡಿಯೋ ಇದಾಗಿದ್ದು, ಧ್ವನಿ ಮಾದರಿ ಪರಿಶೀಲನೆಯಲ್ಲಿ ಹೊಂದಾಣಿಕೆಯಾಗಿದೆ. ಹೀಗಾಗಿ ಇದು ದೊಡ್ಡ ಸಾಕ್ಷ್ಯವಾಗಿ ಪರಿಣಮಿಸಬಹುದು ಎನ್ನಲಾಗಿದೆ.
2022 ಮೇ 18 ರಂದು ದೆಹಲಿಯ ಮೆಹ್ರೌಲಿಯಲ್ಲಿರುವ ಫ್ಲಾಟ್ನಲ್ಲಿ ಆರೋಪಿ ಪೂನಾವಾಲ ಶ್ರದ್ದಾ ವಾಕರ್ಳನ್ನು ಹತ್ಯೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಬಚ್ಚಿಟ್ಟು ಪ್ರತಿದಿನ ಒಂದೊಂದು ತುಂಡುಗಳನ್ನು ಅರಣ್ಯದಲ್ಲಿ ಎಸೆದಿದ್ದ. ಘಟನೆ ತಡವಾಗಿ ಬೆಳಕಿಗೆ ಬಂದು ಆರೋಪಿಯ ಬಂಧನವಾಗಿತ್ತು.