ನವದೆಹಲಿ, ಜ 22 (DaijiworldNews/DB): ಶಿಕ್ಷಣ ಕ್ಷೇತ್ರದಲ್ಲಿ ಮೋದಿ ಸರ್ಕಾರದ ಸಾಧನೆ ಫೇಲ್ ಆಗಿದೆ. ಹೀಗಾಗಿ ರಿಪೋರ್ಟ್ ಕಾರ್ಡ್ನಲ್ಲಿ ಸರ್ಕಾರ ಫೇಲ್ ಎಂದು ತೋರಿಸಲು ನಾನು ಎಫ್ ನೀಡಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇತ್ತೀಚಿನ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯನ್ನು ಉಲ್ಲೇಖಿಸಿ ಭಾನುವಾರ ಟ್ವೀಟ್ ಮಾಡಿರುವ ಅವರು, ಪಠ್ಯಪುಸ್ತಕ ಓದುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದಕ್ಕೆ ಮೋದಿ ಸರ್ಕಾರಕ್ಕೆ ಎಫ್ ನೀಡಲೇಬೇಕಾಗಿದೆ. ಎಫ್ ಎಂದರೆ ಫೇಲ್. ಮೋದಿ ಸರ್ಕಾರದ ಶಿಕ್ಷಣ ರಿಪೋರ್ಟ್ ಕಾರ್ಡ್ನಲ್ಲಿ ಫೇಲ್ ಉಲ್ಲೇಖಿಸದೆ ವಿಧಿಯಿಲ್ಲ ಎಂದಿದ್ದಾರೆ.
ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ 2ನೇ ತರಗತಿಯ ಪುಸ್ತಕ ಓದಲು ಸಮರ್ಥವಾಗಿರುವ 3ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ 2018ರಲ್ಲಿ ಶೇ. 27.3 ಇದ್ದರೆ, 2022ರಲ್ಲಿ ಶೇ. 20ಕ್ಕೆ ಇಳಿದಿದೆ. 2ನೇ ತರಗತಿಯ ಪುಸ್ತಕ ಓದಲು ಸಮರ್ಥವಾಗಿರುವ 5ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 2018ರಲ್ಲಿ ಶೇ. 50.5 ಇದ್ದರೆ, 2022ರಲ್ಲಿ ಶೇ. 42.8ಕ್ಕೆ ಇಳಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಭರ್ತಿಯಾಗದೇ ಬಾಕಿ ಉಳಿದಿವೆ. ಆದರೆ ಇಂದು 71 ಸಾವಿರ ನೇಮಕಾತಿ ಪತ್ರಗಳನ್ನಷ್ಟೇ ಪ್ರಧಾನಿ ಮೋದಿ ವಿತರಿಸಿದ್ದಾರೆ. ಇದು ಸಾಗರದಲ್ಲಿನ ಒಂದು ಹನಿಗೆ ಸಮವಷ್ಟೇ ಎಂದು ಈ ಹಿಂದೆ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.