ಚೆನ್ನೈ, ಜ 22 (DaijiworldNews/DB): ರಾಜ್ಯಾದ್ಯಂತ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ನಿರ್ಧಾರವನ್ನು ಆಡಳಿತ ಪಕ್ಷ ಡಿಎಂಕೆ ಟೀಕಿಸಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ನಕಲು ಇದೆಂದು ಡಿಎಂಕೆ ವ್ಯಂಗ್ಯವಾಡಿದೆ.
ಆಡಳಿತ ಪಕ್ಷದ ಮುಖವಾಣಿ 'ಮುರಸೋಲಿ'ಯಲ್ಲಿ ಈ ಕುರಿತು ಉಲ್ಲೇಖಿಸಿರುವ ಡಿಎಂಕೆ, ಏಪ್ರಿಲ್ 14ರಿಂದ ದಕ್ಷಿಣ ತಮಿಳುನಾಡಿನ ಕಡಲತೀರದಲ್ಲಿರುವ ದೇವಾಲಯದ ಪಟ್ಟಣವಾದ ತಿರುಚೆಂದೂರ್ನಿಂದ ಆರಂಭವಾಗಲಿರುವ ಅಣ್ಣಾಮಲೈ ಪಾದಯಾತ್ರೆಯು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಪರಿಣಾಮದಿಂದಲೇ ಕೂಡಿದೆ. ಇದು ಭಾರತ್ ಜೋಡೋ ಯಾತ್ರೆಯ ನಕಲು ಎಂದು ಲೇವಡಿ ಮಾಡಿದೆ.
ಕಣ ಮಾಯಿಲಾದ ಪದ್ಯವನ್ನು ನೆನಪಿಸುವಂತೆ ಅಣ್ಣಾಮಲೈ ಪಾದಯಾತ್ರೆ ಭಾಸವಾಗುತ್ತದೆ. ನಕಲಿನಿಂದ ಪ್ರಯೋಜನ ಶೂನ್ಯ ಎಂಬುದನ್ನು ತಮಿಳಿನ ಈ ಹಳೆಯ ಪದ್ಯ ಹೇಳುತ್ತದೆ ಎಂದು ಡಿಎಂಕೆ ಕುಟುಕಿದೆ.
ಮುಂಬರುವ ಲೋಕಸಭಾ ಚುನಾವಣೆ ಪ್ರಚಾರಕ್ಕೂ ಮುನ್ನ ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಲು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ನಿರ್ಧರಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ತಮಿಳು ಹೊಸ ವರ್ಷದ ದಿನವಾದ ಏಪ್ರಿಲ್ 14ರಂದು ಪಾದಯಾತ್ರೆ ಆರಂಭಿಸಲು ದಿನಾಂಕ ನಿಗದಿಪಡಿಸಿದ್ದಾರೆ.