ನವದೆಹಲಿ, ಜ 22 (DaijiworldNews/DB): ಭಾರತ್ ಜೋಡೋ ಯಾತ್ರೆ ಮೂಲಕ ದೇಶವನ್ನು ಒಗ್ಗೂಡಿಸುತ್ತೇವೆಂದು ಕಾಂಗ್ರೆಸ್ ಹೊರಟಿದೆ. ಹಾಗಾದರೆ ಅವರು ಒಗ್ಗೂಡಿಸಲೆತ್ನಿಸುತ್ತಿರುವ ಭಾರತ ಮುರಿದ ರಾಷ್ಟ್ರವೇ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ದ್ವೇಷ ಹುಟ್ಟುಹಾಕುತ್ತಿರುವವರು ಯಾರು? ರಾಹುಲ್ ಗಾಂಧಿಯವರೇ ನಿಮಗೆ ಏನಾಯಿತು? ದೇಶದ ಸೈನಿಕರ ಶೌರ್ಯದ ಬಗ್ಗೆಯೇ ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಾರೆ ಎಂದು ಕಿಡಿ ಕಾರಿದರು.
ದೇಶದ ಪ್ರತಿಷ್ಠೆ, ಗೌರವಕ್ಕೆ ಧಕ್ಕೆ ಉಂಟಾಗುವ ಪ್ರಯತ್ನವನ್ನು ಮಾಡಬೇಡಿ. ಸರ್ಕಾರಗಳನ್ನು ರಚಿಸಲು ಮಾತ್ರ ರಾಜಕೀಯ ಇರುವುದಲ್ಲ. ಸಮಾಜಗಳನ್ನು ರಚಿಸುವಲ್ಲಿ ರಾಜಕೀಯ ಪಾತ್ರ ವಹಿಸಬೇಕು ಎಂದರು.
ಭಾರತ ಪ್ರಸ್ತುತ ಆರ್ಥಿಕತೆಯಲ್ಲಿ ವಿಶ್ವದಲ್ಲೇ ಐದನೇ ಅತಿದೊಡ್ಡ ರಾಷ್ಟ್ರವಾಗಿದೆ. 2047ರ ವೇಳೆಗೆ ದೇಶ ಶ್ರೀಮಂತವಾಗುವುದು ನಿಶ್ಚಿತ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿಗೊಳಿಸಲಾಗಿದೆ ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು.