ನವದೆಹಲಿ, ಜ 23 (DaijiworldNews/HR): 2002ರ ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ತಡೆದಿರುವ ಬಿಜೆಪಿ ಸರ್ಕಾರವು ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ ಕುರಿತ ಮುಂಬರುವ ಚಿತ್ರಕ್ಕೂ ತಡೆಯೊಡ್ಡುತ್ತಾರೆಯೇ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
2002ರಲ್ಲಿ ನಡೆದ ಗುಜರಾತ್ ಗಲಭೆ ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಲಾಗಿದ್ದ ಬಿಬಿಸಿ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್ಗಳನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್ಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಇನ್ನು ಕೇಂದ್ರದ ಈ ನಿರ್ಧಾರವನ್ನು ವಿರೋಧಿಸಿದ ಓವೈಸಿ, 'ಗುಜರಾತ್ ಗಲಭೆಯಲ್ಲಿ ಬಾಹ್ಯಾಕಾಶ ಅಥವಾ ಆಕಾಶದಿಂದ ಬಂದು ಯಾರಾದರೂ ಜನರನ್ನು ಕೊಂದಿದ್ದಾರೆಯೇ? ಹತ್ಯೆ ಹಾಗೂ ಗಲಭೆಯಾಗಿರುವುದು ನಿಜ. ಅದರ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದು ತಪ್ಪೇನಿದೆ. ಅದರ ಮೇಲೆ ಯಾಕೆ ನಿಷೇಧ ಹೇರಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.