ನವದೆಹಲಿ, ಜ 23( DaijiworldNews/MS): ಕರ್ನಾಟಕದ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗಾಗಿ ಪಟ್ಟಿ ಮಾಡಿದ್ದು, ಇದಲ್ಲದೆ ಪ್ರಕರಣಕ್ಕೆ ತ್ರಿಸದಸ್ಯ ಪೀಠವನ್ನು ಸ್ಥಾಪಿಸುವ ಮನವಿಯನ್ನು ಪರಿಗಣಿಸಲು ಸೋಮವಾರ ಸಮ್ಮತಿಸಿದೆ.
ವಿದ್ಯಾರ್ಥಿಗಳ ಪರವಾಗಿ ಹಾಜರಾದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ವಿ.ರಾಮಸುಬ್ರಮಣಿಯನ್, ಜೆ.ಬಿ.ಪಾರ್ದಿವಾಲಾ ಪೀಠದ ಎದುರು ವಿಷಯವನ್ನು ಪ್ರಸ್ತಾಪಿಸಿದರು.
ಸ್ಕಾರ್ಫ್ ಧರಿಸಲು ನಿರ್ಬಂಧ ಹೇರಿದ್ದರಿಂದ ಒಂದು ವರ್ಷ ಕಳೆದು ಕೊಂಡ ಹೆಣ್ಣುಮಕ್ಕಳ ಪ್ರಕರಣವನ್ನು ಮೀನಾಕ್ಷಿ ಪ್ರಸ್ತಾಪಿಸಿ ಪ್ರಾಯೋಗಿಕ ಪರೀಕ್ಷೆಗಳು ಫೆಬ್ರವರಿ 6 ರಿಂದ ಪ್ರಾರಂಭವಾಗುತ್ತವೆ. ಹೀಗಾಗಿ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ನಿರ್ದೇಶನ ನೀಡಬೇಕು’ ಎಂದು ಅವರು ಮನವಿ ಮಾಡಿದರು